ಸಿನಿಮಾ ಸುದ್ದಿ

ನನಗೂ ಒಂದು ಅವಕಾಶ ಕೊಡಿ, ಸಮಸ್ಯೆ ಪರಿಹಾರಕ್ಕೆ ಸಿದ್ಧ: ಮಹಿಳಾ ಆಯೋಗಕ್ಕೆ ದರ್ಶನ್ ಸ್ಪಷ್ಟನೆ

Lingaraj Badiger
ಬೆಂಗಳೂರು: ತಮ್ಮ ದಾಂಪತ್ಯ ಕಲಹದ ಬಗ್ಗೆ ರಾಜ್ಯ ಮಹಿಳಾ ಆಯೋಗಕ್ಕೆ ಸ್ಪಷ್ಟನೆ ನೀಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ನನಗೂ ಒಂದು ಅವಕಾಶ ಕೊಡಿ. ನನ್ನ ಕೌಟುಂಬಿಕ ಸಮಸ್ಯೆ ಪರಿಹರಿಸಿಕೊಳ್ಳಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ನಿನ್ನೆ ಪತ್ನಿ ವಿಜಯಲಕ್ಷ್ಮಿ ಮನೆ ಬಳಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗಕ್ಕೆ ಪ್ರತಿಕ್ರಿಯೆ ನೀಡಿರುವ ದರ್ಶನ್, ನನ್ನ ಮಗನನ್ನು ನನ್ನಿಂದ ದೂರವಿಟ್ಟಿದ್ದಾರೆ. ಹೀಗಾಗಿ ನಾನು ನಿನ್ನೆ ನನ್ನ ಮಗನನ್ನು ನೋಡಲು ಹೋಗಿದ್ದೆ. ಮಗನನ್ನು ನೋಡಲು ಹೋಗಿದ್ದೆ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ ಎಂದು ದರ್ಶನ್ ಹೇಳಿರುವುದಾಗಿ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಮಾಧ್ಯಮಕ್ಕೆ ತಿಳಿಸಿದ್ದಾರೆ.
ನನಗೆ ಏಕೆ ಈ ರೀತಿಯ ಸಂಕಷ್ಟುಗಳು ಎದುರಾಗುತ್ತವೆ? ನನ್ನ ಮಗನನ್ನು ನೋಡಲು ನನಗೆ ಅವಕಾಶವಿಲ್ಲವೆ? ಎಂದು ಪ್ರಶ್ನಿಸಿರುವ ದರ್ಶನ್, ನಾನು ನಿನ್ನೆ ನನ್ನ ಮಗನನ್ನು ನೋಡಲು ಅಪಾರ್ಟ್ ಮೆಂಟ್ ಗೆ ತೆರಳಿದ್ದೆ. ಆದರೆ ಪತ್ನಿ ವಿಜಯಲಕ್ಷ್ಮಿ ಮಗು ನೋಡಲು ಅವಕಾಶ ನೀಡಲಿಲ್ಲ. ಕಳೆದ ಮೂರು ದಿನಗಳಿಂದ ನಾನು ಮಗನನ್ನು ನೋಡಿರಲಿಲ್ಲ. ನಿನ್ನೆಯೂ ಮಗು ನೋಡಲು ಸಾಧ್ಯವಾಗದಿದ್ದಾಗ ಸೆಕ್ಯೂರಿಟಿ ಗಾರ್ಡ್ ಜೊತೆ ಅನುಚಿತವಾಗಿ ವರ್ತಿಸಿದೆ ಎಂದು ಒಪ್ಪಿಕೊಂಡಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ಮಹಿಳಾ ಆಯೋಗಕ್ಕೆ ಸ್ಪಷ್ಟನೆ ನೀಡಿದ್ದು, ನನಗೂ ಸಹ ದರ್ಶನ ನೀಡಿರುವ ಹಿಂಸೆಯಿಂದ ತುಂಬಾ ನೋವಾಗಿದೆ. ನನಗೆ ನನ್ನ ಪತಿಯ ಇಮೇಜ್ ಮತ್ತು ನನ್ನ ಮಗನ ಭವಿಷ್ಯ ಎರಡೂ ಮುಖ್ಯ. ಹೀಗಾಗಿ ದರ್ಶನ್ ವಿರುದ್ಧ ಸಾರ್ವಜನಿಕವಾಗಿ ಏನೂ ಹೇಳುವುದಿಲ್ಲ. ಆದರೆ ಕೌಟುಂಬಿಕ ಸಮಸ್ಯೆ ಪರಿಹರಿಸಿಕೊಳ್ಳಲು ನಾನು ಸಿದ್ಧ ಎಂದು ವಿಜಯಲಕ್ಷ್ಮಿ ಹೇಳಿರುವುದಾಗಿ ಮಂಜುಳಾ ಮಾನಸ ಮಾಧ್ಯಮಕ್ಕೆ ತಿಳಿಸಿದ್ದಾರೆ.
SCROLL FOR NEXT