ಬೆಂಗಳೂರು: ನಟ ದರ್ಶನ್ ಕೌಟುಂಬಿಕ ಕಲಹಕ್ಕೆ ಶನಿವಾರ ತೆರೆ ಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ನಟ ಮತ್ತು ವಸತಿ ಸಚಿವ ಅಂಬರೀಶ್ ನೇತೃತ್ವದಲ್ಲಿ ನಡೆಯುತ್ತಿರುವ ರಾಜಿ ಸಂಧಾನ ಪ್ರಕ್ರಿಯೆ ಮುಂದುವರೆದಿದೆ.
ಮೂಲಗಳ ಪ್ರಕಾರ ಅಂಬರೀಶ್ ಅವರು ಈಗಾಗಲೇ ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರೊಂದಿಗೆ ದೂರವಾಣಿಯಲ್ಲಿ ಪ್ರತ್ಯೇಕವಾಗಿ ಮಾತನಾಡಿದ್ದು, ಶನಿವಾರ ಅಥವಾ ಭಾನುವಾರ ದಂಪತಿಯ ರಾಜಿ-ಸಂಧಾನ ಫಲಪ್ರದವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಅಂಬರೀಶ್ ಅವರು, "ದರ್ಶನ್ ಹಾಗೂ ವಿಜಯಲಕ್ಷ್ಮೀ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಬದುಕಿ ಬಾಳಬೇಕಾದವರು ನೀವು, ಅನಗತ್ಯವಾಗಿ ಗಲಾಟೆ ಮಾಡಿಕೊಳ್ಳಬೇಡಿ' ಎಂದು ತಿಳಿಹೇಳಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಅಷ್ಟೇ ಅಲ್ಲ, ಸಂಸಾರಿಕ ವಿಷಯಗಳ ಬಗ್ಗೆ ಎರಡು ದಿನಗಳು ಮಾಧ್ಯಮಗಳಿಗಾಗಲಿ ಅಥವಾ ಸಾರ್ವಜನಿಕವಾಗಿ ಆಗಲಿ ಯಾವುದೇ ಪ್ರತಿಕ್ರಿಯೆ ನೀಡದೆ, ಮೌನವಾಗಿರುವಂತೆ ಇಬ್ಬರಿಗೂ ಸೂಚಿಸಿದ್ದೇನೆ. ಇದಕ್ಕೆ ಅವರಿಬ್ಬರೂ ಒಪ್ಪಿಕೊಂಡಿದ್ದಾರೆ. ಶನಿವಾರ ದರ್ಶನ್‌ಗೆ ಬೆಂಗಳೂರಿಗೆ ಬರಲು ಹೇಳಿದ್ದೇನೆ. ಆತ ಬಂದ ನಂತರ ಪತಿ-ಪತ್ನಿಯನ್ನು ಒಟ್ಟಿಗೆ ಕುರಿಸಿ ಬುದ್ಧಿವಾದ ಹೇಳುವುದಾಗಿ ಅಂಬರೀಶ್ ತಿಳಿಸಿದರು.
ವಿಜಯಲಕ್ಷ್ಮೀ ಭೇಟಿಯಾದ ದರ್ಶನ್ ಸ್ನೇಹಿತ
ಈ ನಡುವೆ ದರ್ಶನ್ ದಂಪತಿಗಳ ಕೌಟುಂಬಿಕ ಕಲಹದ ಶಮನಗೊಳಿಸಲು ದರ್ಶನ್ ಸ್ನೇಹಿತರು ಕೂಡ ಮುಂದಾಗಿದ್ದು, ಮಹತ್ವದ ಬೆಳವಣೆಗೆಯಲ್ಲಿ ಶುಕ್ರವಾರ ರಾತ್ರಿ ವಿಜಯಲಕ್ಷ್ಮೀ ಅವರೊಂದಿಗೆ ದರ್ಶನ್ ಅವರ ಕೆಲ ಆಪ್ತ ಗೆಳೆಯರು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹೊಸಕೆರೆ ಸಮೀಪದ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್‌ಮೆಂಟ್‌ನಲ್ಲಿರುವ ದರ್ಶನ್ ಪತ್ನಿ ವಿಜಯಲಕ್ಷ್ಮೀ ನಿವಾಸಕ್ಕೆ ದರ್ಶನ್ ಗೆಳೆಯ ಹಾಗೂ ನಟ ಸೌರವ್ ಭೇಟಿ ನೀಡಿ, ವಿಜಯಲಕ್ಷ್ಮೀ ಜತೆ ಕೆಲ ಹೊತ್ತು ಸಮಾಲೋಚನೆ ನಡೆಸಿದ್ದಾರೆ. ಆದರೆ, ಸೌರವ್ ಮತ್ತು ವಿಜಯಲಕ್ಷ್ಮೀ ಭೇಟಿ ಮಾತುಕತೆ ವಿವರಗಳು ಈ ವರೆಗೂ ಲಭ್ಯವಾಗಿಲ್ಲ.
ಆದರೆ, ಶನಿವಾರ ಅಂಬರೀಶ್ ಮಧ್ಯಸ್ಥಿಕೆಯಲ್ಲಿ ನಡೆಯಲಿರುವ ರಾಜೀ ಸಂಧಾನಕ್ಕೆ ಪೂರ್ವ ವೇದಿಕೆ ಕಲ್ಪಿಸಲು ಸೌರವ್ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.