ಸಿನಿಮಾ ಸುದ್ದಿ

ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಿಂಧು ಲೋಕನಾಥ್

Guruprasad Narayana

ಬೆಂಗಳೂರು: ಕನ್ನಡ ಪ್ರೇಕ್ಷಕರ ಮನಗೆದ್ದಿರುವ ನಟಿ ಸಿಂಧು ಲೋಕನಾಥ್, ಅದನ್ನು ಮಲೆಯಾಳಂ ಚಿತ್ರರಂಗದಲ್ಲೂ ಮರುಕಳಿಸಲು 'ಥೆನೀಚ' ಸಿನೆಮಾ ಮೂಲಕ ನೆರೆಯ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ.

ಇದು ತೆಲುಗು ಮತ್ತು ತಮಿಳಿನಲ್ಲೂ ಸಿದ್ಧವಾಗುತ್ತಿದ್ದು, ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ನಟಿಸಿರುವ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಲಿದ್ದಾರೆ.

ಅವಕಾಶ ಹುಡಿಕಿ ಬಂದಾಗ ಒಪ್ಪಿಕೊಳ್ಳಲು ಯೋಚಿಸಲೇ ಇಲ್ಲ ಎನ್ನುವ ನಟಿ "ಮಲಯಾಳಂ ಚಿತ್ರರಂಗದಲ್ಲಿ ಬರುವ ಸಿನೆಮಾಗಳ ಬಗ್ಗೆ ನನಗೆ ತಿಳಿದಿದ್ದು, ಇದು ನನ್ನ ಅದೃಷ್ಟ ಎನಿಸಿತು. ಕಥೆ ಕೇಳಿದಮೇಲೆ ನೆರೆಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಒಳ್ಳೆಯ ಸಿನೆಮಾ ಎಂದೆನಿಸಿತು ಆದುದರಿಂದ ಒಪ್ಪಿಕೊಂಡೆ" ಎನ್ನುತ್ತಾರೆ ಸಿಂಧು.

ದಿನೇಶ್ ನಾಚಪ್ಪ ಈ ಸಿನೆಮಾವನ್ನು ನಿರ್ಮಿಸುತ್ತಿದ್ದು, ಸುಮಾರು 20 ಸಿನೆಮಾಗಳಲ್ಲಿ ಸಹ ನಿರ್ದೇಶಕನಾಗಿ ದುಡಿದಿರುವ ಮೋತಿ ಕೈಕೇರನ್ ಚೊಚ್ಚಲ ಬಾರಿಗೆ ಪೂರ್ಣಪ್ರಮಾಣದ ನಿರ್ದೇಶಕರಾಗಲಿದ್ದಾರೆ.

ನಟಿ ಈಗಾಗಲೇ ಕೊಡಗಿನಲ್ಲಿ ಒಂದು ವಾರದ ಚಿತ್ರೀಕರಣ ಮುಗಿಸಿದ್ದಾರೆ. "ಮುಂದಿನ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಏಪ್ರಿಲ್ ಮೊದಲ ವಾರ ಪ್ರಾರಂಭವಾಗಲಿದೆ" ಎಂದು ವಿವರಿಸುತ್ತಾರೆ.

ಸಿಂಧು ಪತ್ರಕರ್ತೆಯ ಪಾತ್ರ ನಿರ್ವಹಿಸಲಿದ್ದಾರಂತೆ. ಈ ಹಿಂದೆ ಮಲಯಾಳಂ ನಿಂದ ಅವಕಾಶಗಳು ಬಂದಿದ್ದರೂ ಭಾಷೆ ಗೊತ್ತಿಲ್ಲದಿದ್ದರಿಂದ ಹಿಂದೆಸರಿದಿದ್ದರಂತೆ. "ನನಗೆ ಈ ಹೊಸ ಭಾಷೆ ಮಾತನಾಡಲು ಅಥವಾ ಅರ್ಥ ಮಾಡಿಕೊಳ್ಳಲು ಯಾವಾಗಲು ಕಷ್ಟವಾಯಿತು. ಈ ಸಿನೆಮಾಗಾಗಿ ಕೇಳಿದಾಗಲೂ ನನಗೆ ಭಾಷೆ ಗೊತ್ತಿಲ್ಲವಾದ್ದರಿಂದ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಲು ಸಾಧ್ಯವೇ ಎಂಬ ಭಯ ಇನ್ನೂ ಇತ್ತು. ಆದರೆ ಸ್ಕ್ರಿಪ್ಟ್ ನೋಡಿದ ಮೇಲೆ ಅವಕಾಶ ಕಳೆದುಕೊಳ್ಳಲು ಮನಸ್ಸಾಗಲಿಲ್ಲ. ನಾಯಕ ನಟಿ ಪ್ರಧಾನಿ ಚಿತ್ರ ಇದು" ಎಂದು ವಿವರಿಸುತ್ತಾರೆ ಸಿಂಧು.

SCROLL FOR NEXT