ಸಿನಿಮಾ ಸುದ್ದಿ

ಶಿವರಾಜ್ ಕುಮಾರ್ ಚಿತ್ರ ನಿರ್ದೇಶಿಸಲಿರುವ ಚಂದ್ರಶೇಖರ್ ಬಂಡಿಯಪ್ಪ

Guruprasad Narayana

ಬೆಂಗಳೂರು: ತಮ್ಮ ಎರಡನೇ ಸಿನೆಮಾ, ಶ್ರೀಮುರಳಿ ನಟಿಸಿದ್ದ 'ರಥಾವರ' ಸಿನೆಮಾದ ಮೂಲಕ ವಾಣಿಜ್ಯ ಯಶಸ್ಸು ಕಂಡ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಈಗ ಮತ್ತೊಬ್ಬ ದೊಡ್ಡ ಸ್ಟಾರ್ ಶಿವರಾಜ್ ಕುಮಾರ್ ಜೊತೆಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ. "ಅವರ ಜೊತೆಗೆ ಕೆಲಸ ಮಾಡುವುದು ಗೌರವ. ನನ್ನ ವೃತ್ತಿ ಜೀವನದಲ್ಲಿ ಇಷ್ಟು ಬೇಗ ಅವರ ಸಿನೆಮಾ ನಿರ್ದೇಶಿಸುವುದಕ್ಕೆ ಅವಕಾಶ ಸಿಕ್ಕಿರುವುದಕ್ಕೆ ನಾನು ಅದೃಷ್ಟವಂತ" ಎನ್ನುತ್ತಾರೆ ಬಂಡಿಯಪ್ಪ.

"ಸಿನೆಮಾದಲ್ಲಿ ಕಂಟೆಂಟ್ ಅತಿ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಂಡೆ, ಈ ಕಾರಣಕ್ಕಾಗಿಯೇ ರಥಾವರ ಯಶಸ್ವಿಯಾಗಿದ್ದು. ಶಿವರಾಜ್ ಕುಮಾರ್ ಕೂಡ ಉತ್ತಮ ಕಥೆಗಳ ಬಗ್ಗೆ ಆಸಕ್ತಿ ತೋರುತ್ತಾರೆ ಅದಕ್ಕಾಗಿಯೇ ಅವರು ಈ ಸಿನೆಮಾದಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿದ್ದು. ಈ ಕಥೆ ಅವರಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ ಆದುದರಿಂದಲೇ ನಾನು ಕಥೆ ಹೇಳಿದಾಕ್ಷಣ ಅವರು ಒಪ್ಪಿಕೊಂಡರು.

ಮತ್ತೊಂದು ಕಡೆ ನಾನು ಉತ್ಸುಕನಾಗಿದ್ದರೂ ಅತಿ ದೊಡ್ಡ ನಟನನ್ನು ನಿರ್ದೇಶಿಸುವುದಕ್ಕೆ ಭಯವೂ ಇದೆ" ಎನ್ನುತ್ತಾರೆ ಬಂದಿಯಪ್ಪ.

ಇದಕ್ಕೂ ಮುಂಚಿತವಾಗಿ ಘೋಷಣೆಯಾದಂತೆ ಬಂಡಿಯಪ್ಪ ಅವರ ಮೂರನೆ ಸಿನೆಮಾವನ್ನು ಆರ್ ಚಂದು ನಿರ್ಮಿಸಬೇಕಿತ್ತು ಮತ್ತು ಅದಕೆ ಹೊಸ ನಟ ಅನೂಪ್ ಆಯ್ಕೆಯಾಗಿದ್ದರು. ಈಗ ಆ ಯೋಜನೆ ರದ್ದಾಗಿದೆ ಎಂದು ವಿವರಿಸುವ ಚಂದ್ರಶೇಖರ್ "ಕಥೆ ಚೆನ್ನಾಗಿದ್ದರೂ, ಅನೂಪ್ ಅವರಿಗೆ ಪಾತ್ರ ಸರಿ ಹೊಂದಲಿಲ್ಲ. ಆದುದರಿಂದ ಅದನ್ನು ಕೈಬಿಟ್ಟೆ" ಎನ್ನುತ್ತಾರೆ.

'ಶ್ರೀಕಂಠ'ಕ್ಕೆ ಚಿತ್ರೀಕರಣ ಮುಗಿಸಿರುವ ಶಿವರಾಜ್ ಕುಮಾರ್ ಸದ್ಯಕ್ಕೆ ಯೋಗಿ ಜಿ ರಾಜ್ ಅವರ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನೆಮಾದಲ್ಲಿ ನಿರತರಾಗಿದ್ದಾರೆ. ನಂತರ ಸಹನಾ ಮೂರ್ತಿ ಅವರ 'ಮಾಸ್ ಲೀಡರ್'ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. "ಆಗಸ್ಟ್ ನಿಂದ ಶಿವರಾಜ್ ಕುಮಾರ್ ನನಗೆ ಸಮಯ ನೀಡಿದ್ದಾರೆ" ಎನ್ನುತ್ತಾರೆ ಬಂಡಿಯಪ್ಪ.

ಧರ್ಮ ವಿಶ್ ಸಂಗೀತ ನೀಡಲಿದ್ದು, ನವೀನ್ ಕುಮಾರ್ ಸಿನೆಮಾಗೆ ಛಾಯಾಗ್ರಹಣ ಮಾಲಿದ್ದಾರೆ ಎಂದು ತಿಳಿಸುತ್ತಾರೆ ಚಂದ್ರಶೇಖರ್.  

SCROLL FOR NEXT