ಬೆಂಗಳೂರು: ನಟ ದಶನ್ ಮತ್ತು ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಜೋಡಿ ಈ ಹಿಂದೆ ಹಲವಾರು ಸಿನೆಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದು, ಪ್ರತಿ ಬಾರಿಯೂ ಹೊಸದನ್ನು ನೀಡುವ ತವಕದಲ್ಲಿರುತ್ತಾರೆ ಸಂಗೀತ ನಿರ್ದೇಶಕ. ದರ್ಶನ್ ನಟನೆಯ ೧೯ ನೆಯ ಚಿತ್ರ 'ಜಗ್ಗುದಾದ' ಸಿನೆಮಾದ ಆಡಿಯೋ ಇಂದು ಬಿಡುಗಡೆಯಾಗಲಿದ್ದು, ಹರಿಕೃಷ್ಣ ತಮ್ಮ ನೂತನ ಆಲ್ಬಂ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದು ಹೀಗೆ.
"ಸಿನೆಮಾ ಕಾಮಿಡಿ ಟ್ರ್ಯಾಕ್ ನಲ್ಲಿ ನಡೆದರೂ ದಶನ್ ಅವರ ಸ್ಟಾರ್ ನಟನೆಗೆ ಯಾವುದೇ ಕುಂದಾಗಿಲ್ಲ" ಎನ್ನುವ ಸಂಗೀತ ನಿರ್ದೇಶಕ ಈ ಬಾರಿ 'ಜಗ್ಗುದಾದ' ಪಾತ್ರದ ಬಗ್ಗೆ ಹೆಚ್ಚು ಗಮನ ಹರಿಸಿರುವುದಾಗಿ ಹೇಳುತ್ತಾರೆ. "ಶಕ್ತಿಯುತ ಪರಿಚಯ ಹಾಡನ್ನು ಈ ಬಾರಿ ನೀಡಿದ್ದೇನೆ. ಅದು ಹೀಗಿದೆ - ಎದ್ದೇಳೊಲೆ ಜಗ್ಗು ದಾದ ಬಂದ, ಸೀದ ನಿಲ್ಲೋ, ದಾದಾ ಬಂದ, ಶೋಕಿ ಅವಾಜ್ ಬೇಡ ಕಂದ, ಧಮಕಿ ಎಲ್ಲಾ ಜಗ್ಗುಗೆ ಚಂದ, ದೆ ಕಾಲ್ ಹಿಮ್ ಮಾಸ್, ವಿ ಕಾಲ್ ಹಿಮ್ ಬಾಸ್.
"ಒಂದು ಮದುವೆ ಹಾಡು, ಒಂದು ಸುಶ್ರಾವ್ಯ ಮತ್ತು ಒಂದು ಟಪ್ಪಾಂಗುಚ್ಚಿ ಹಾಡಿದೆ. ಮಧ್ಯೆ ಜಗ್ಗು ದಾದದ ಥೀಮ್ ಸಂಗೀತ ಇರುತ್ತದೆ. ಈ ರೀತಿ ಸಿನೆಮಾ ಹೆಚ್ಚು ಸಂಗೀತಮಯವಾಗಿದೆ. ನನಗೆ ದರ್ಶನ್ ಕೆಲಸ ಮಾಡುವ ರೀತಿ ಪರಿಚಯವಿದ್ದು ನನ್ನ ಕೆಲಸ ಸುಲಭವಾಯಿತು. ಆ ಪಾತ್ರದ ನಾಡಿಯನ್ನು ಸಂಗೀತದಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದೇನೆ" ಎನ್ನುತ್ತಾರೆ ಹರಿಕೃಷ್ಣ.
ಈ ಸಿನೆಮಾಗಾಗಿ ಯೋಗರಾಜ್ ಭಟ್, ಕವಿರಾಜ್, ಡಾ. ನಾಗೇಂದ್ರ ಪ್ರಸಾದ್ ಮತ್ತು ಚೇತನ್ ಬಹದ್ದೂರ್ ತಲಾ ಒಂದು ಹಾಡುಗಳನ್ನು ಬರೆದಿದ್ದಾರೆ.
ಈ ಸಿನೆಮಾಗೆ ಹಿನ್ನಲೆ ಸಂಗೀತ ಕೂಡ ಹರಿಕೃಷ್ಣ ಅವರೇ ನಿಡುತ್ತಿದ್ದಾರೆ. ಈಶ್ವರಿ ಕುಮಾರ್ ಕಥೆ ರಚಿಸಿರುವ ಈ ಸಿನೆಮಾವನ್ನು ರಾಘವೇಂದ್ರ ಹೆಗಡೆ ನಿರ್ದೇಶಿಸಿ, ನಿರ್ಮಿಸಲಿದ್ದಾರೆ. ದೀಕ್ಷಾ ಸೇಠ್ ನಾಯಕ ನಟಿಯಾಗಿರುವ ಈ ಸಿನೆಮಾ ಜೂನ್ ನಲ್ಲಿ ತೆರೆ ಕಾಣಲಿದೆ. ಸೃಜನ್ ಲೋಕೇಶ್, ವಿಶಾಲ್ ಮತ್ತು ಯುವರಾಜ್ ಕೂಡ ತಾರಾಗಣದಲ್ಲಿದ್ದು ರಚಿತಾ ರಾಮ್ ಮತ್ತು ದೀಪಿಕಾ ಕಾಮಯ್ಯ ಅತಿಥಿ ನಟರು. ಹೆಚ್ ಸಿ ವೇಣು ಅವರ ಛಾಯಾಗ್ರಹಣ ಸಿನೆಮಾಗಿದೆ.