ಬೆಂಗಳೂರು: ಗುರು ದೇಶಪಾಂಡೆ ನಿರ್ದೇಶನದ ಬಹುತಾರಾಗಣದ 'ಜಾನ್ ಜಾನಿ ಜನಾರ್ಧನ' ಸಿನೆಮಾದಲ್ಲಿ 'ಕನ್ನಡ ಕಲೀರಿ' ಎಂಬ ವಿಶೇಷವಾದ ರ್ಯಾಪ್ ಹಾಡನ್ನು ಸೇರಿಸಲಾಗಿದೆ.
ಚಂದನ್ ಶೆಟ್ಟಿ ಸಾಹಿತ್ಯ ರಚನೆ ಮಾಡಿ, ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡಿದ ಮೊದಲ ಸಾಲು ಹೀಗಿದೆ. "ಅ ಆ ಇ ಈ ಉ ಊ.. ಸುಮ್ನೆ ಕನ್ನಡ ಮಾತಾಡು ಮಂಕೆ". ಈ ರ್ಯಾಪ್ ಹಾಡಿನಲ್ಲಿ ಕೃಷ್ಣ, ಅಜಯ್ ರಾವ್ ಮತ್ತು ಯೋಗಿ ಕಾಣಿಸಿಕೊಂಡಿದ್ದರೆ.
ಯುವಕರಿಗೆ ಕನ್ನಡ ಕಲಿಯುವಂತೆ ಪ್ರೇರೇಪಿಸುವ ಮತ್ತೊಂದು ಪ್ರಯತ್ನ ಇದು ಎನ್ನುವ ಸಂಗೀತ ನಿರ್ದೇಶಕ "ಇಂದು ಯುವಕರು ಕನ್ನಡ ಮಾತನಾಡುವುದೇ ಕಡಿಮೆ ಬದಲಿಗೆ ಇಂಗ್ಲಿಶ್ ಮೊರೆ ಹೋಗುತ್ತಾರೆ. ಹಳೆ ರೀತಿಯಲ್ಲಿ ಹೇಳಿದರೆ ಅವರಿಗೆ ಗೊತಾಗುವುದಿಲ್ಲ. ಆದುದರಿಂದ ಅವರ ಮಾರ್ಗದಲ್ಲೇ ಹೇಳಬೇಕಾಯಿತು" ಎನ್ನುತ್ತಾರೆ ಅರ್ಜುನ್ ಜನ್ಯ.
ಗೀತ ರಚನೆ ಮಾಡಿರುವ ಚಂದನ್ ಶೆಟ್ಟಿ ಹೇಳುವಂತೆ "ಈ ಹಾಡಿನ ಅವಶ್ಯಕತೆ ಇರುವ ಸನ್ನಿವೇಶವೊಂದು ಸಿನೆಮಾದಲ್ಲಿದೆ. ಇದು ಎರಡು ಗುಂಪುಗಳ ನಡುವಿನ ಗಲಾಟೆಯ ಸನ್ನಿವೇಶ. ಆದುದರಿಂದ ರ್ಯಾಪ್ ಚೆನ್ನಾಗಿ ಹೊಂದಿಕೊಳ್ಳುತ್ತದೆ ಎನ್ನಿಸಿತು" ಎನ್ನುತ್ತಾರೆ.