ಬೆಂಗಳೂರು: ಕನ್ನಡದ ಬ್ಲಾಕ್ ಬಸ್ಟರ್ ಸಿನೆಮಾ ಮುಂಗಾರು ಮಳೆಯ ಮುಂದಿನ ಭಾಗವಾಗಿ ಮೂಡಿ ಬರುತ್ತಿರುವ ಶಶಾಂಕ್ ನಿರ್ದೇಶನದ ಮುಂಗಾರು ಮಳೆ-೨ ಹಲವಾರು ಕಾರಣಗಳಿಗೆ ಕುತೂಹಲ ಉಳಿಸಿಕೊಂಡಿದೆ. ಅದರಲ್ಲಿ ಗಣೇಶ್ ಮತ್ತು ರವಿಚಂದ್ರನ್ ಜೋಡಿ ಮಗ-ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಒಂದು. ರವಿಚಂದ್ರನ್ ಹುಟ್ಟುಹಬ್ಬದ ದಿನವಾದ ಇಂದು ಈ ಸಿನೆಮಾದ ಸ್ಟಿಲ್ ಕೂಡ ಲಭ್ಯವಾಗಿದೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಹಾಡಿನಲ್ಲಿ ಗಣೇಶ್ ಮತ್ತು ರವಿಚಂದ್ರನ್ ನಡುವಿನ ಭಾವನಾತ್ಮಕ ದೃಶ್ಯಗಳು ಆಪ್ತವಾಗಿ ಮೂಡಿ ಬಂದಿವೆ ಎನ್ನುತ್ತವೆ ಮೂಲಗಳು. ಇದಕ್ಕೆ ಚಂದನ್ ಶೆಟ್ಟಿ ರ್ಯಾಪ್ ಪ್ರಾಕಾರದಲ್ಲಿ ಗೀತರಚನೆ ಮಾಡಿದ್ದು, 'ಏನೇ ಮಾಡು ಬಯ್ಯೋದಿಲ್ಲ ನನ್ನ ಡ್ಯಾಡಿ/ ಚಿಕ್ಕೋನಿದ್ದಾಗ ತಿದ್ದುಸ್ತ್ರಿದು ಎ ಬಿ ಸಿ ಡಿ' ಎಂದಿವೆ ಆ ಹಾಡಿನ ಮೊದಲ ಸಾಲುಗಳು ಎಂದು ತಿಳಿದುಬಂದಿದೆ.
ಸಿನೆಮಾದ ಚಿತ್ರೀಕರಣವನ್ನು ಸಂಪೂರ್ಣಗೊಳಿಸಿರುವ ಶಶಾಂಕ್ ಮುಂದಿನ ವಾರದಿಂದ ಪ್ರಚಾರ ಕಾರ್ಯ ಆರಂಭಿಸಲಿದ್ದಾರಂತೆ. ಈ ತಿಂಗಳ ಅಂತ್ಯಕ್ಕೆ ಆಡಿಯೋ ಬಿಡುಗಡೆ ಮಾಡಲಿದ್ದು, ಜುಲೈ ನಲ್ಲಿ ಸಿನೆಮಾ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
ಇಕೆ ಪಿಕ್ಚರ್ಸ್ ನಿರ್ಮಿಸಿರುವ ಮುಂಗಾರು ಮಳೆ-೨ ರಲ್ಲಿ ನೇಹಾ ಶೆಟ್ಟಿ ಪಾದಾರ್ಪಣೆ ಮಾಡಲಿದ್ದಾರೆ. ಐಂದ್ರಿತಾ ರೇ ಕೂಡ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು,. ರವಿಶಂಕರ್ ಮತ್ತು ಸಾಧುಕೋಕಿಲಾ ಕೂಡ ತಾರಾಗಣದ ಭಾಗವಾಗಿದ್ದಾರೆ.