ಬೆಂಗಳೂರು: ಹಿಮ್ಮಡಿ ಉಳುಕಿಸಿಕೊಂಡು ಗಾಯಗೊಂಡಿದ್ದ ನಟ ಉಪೇಂದ್ರ ಗುಣಮುಖರಾಗಿ ತಮ್ಮ ಮುಂದಿನ ಚಿತ್ರ ಕಲ್ಪನಾ-೨ ಸಿನೆಮಾದ ಪರಿಚಯ ಹಾಡನ್ನು ಸಂಪೂರ್ಣಗೊಳಿಸಿದ್ದಾರೆ.
ಕನ್ನಡ ಮತ್ತು ಕರ್ನಾಟಕದ ಬಗೆಗಿನ ಈ ದೇಶಭಕ್ತ ಹಾಡು ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ. ಕಲೈಮಾಸ್ಟರ್ ಇದಕ್ಕೆ ನೃತ್ಯನಿರ್ದೆಶನ ಮಾಡಿದ್ದು, ೧೦೦ ಹೆಚ್ಚು ಸಹ ನೃತ್ಯಕಾರರು ಮತ್ತು ೧೫೦ಕ್ಕೂ ಹೆಚ್ಚು ಕಿರಿಯ ನಟರು ಭಾಗವಹಿಸಿದ್ದಾರೆ.
"ಪುನೀತ್ ರಾಜಕುಮಾರ್ ಹಾಡಿರುವ ದೇಶಭಕ್ತ ಕನ್ನಡ ಹಾಡಿನ ಚಿತ್ರೀಕರಣಕ್ಕೆ ೪ ದಿನ ತೆಗೆದುಕೊಂಡೆವು. ಉಪೇಂದ್ರ ಅವರ ಕಾಲಿಗೆ ಗಾಯವಾಗಿದ್ದರಿಂದ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಲಾಗಿತ್ತು. ಅವರು ಮೇ೨೯ ರಂದು ಮತ್ತೆ ಚಿತ್ರತಂಡ ಸೇರಿದ್ದು, ಈ ಹಾಡಿನ ಚಿತ್ರೀಕರಣ ಪೂರ್ಣಗೊಳಿಸಿದ್ದೇವೆ" ಎನ್ನುತ್ತಾರೆ ನಿರ್ದೇಶಕ ಅನಂತ ರಾಜು.
ನಟಿ ಅವಂತಿಕಾ ಶೆಟ್ಟಿ ಅವರೊಂದಿಗೆ ಡ್ಯುಯೆಟ್ ಹಾಡಿನ ಚಿತ್ರೀಕರಣಕ್ಕೆ ತಂಡ ಇಂದು ಗೋವಾಗೆ ತೆರಳಲಿದೆ. ಚಿತ್ರೀಕರಣದ ನಂತರದ ಕಾರ್ಯಗಳು ಸುಮಾರು ೯೦ ಪ್ರತಿಶತ ಮುಗಿದಿದ್ದು, ಮೊದಲ ಪ್ರತಿಗೂ ಮುಂಚಿತವಾಗಿ ಈ ಎರಡು ಹಾಡುಗಳನ್ನು ಸೇರಿಸುವ ಕೆಲಸ ಬಾಕಿಯಿದೆ ಎನ್ನುತ್ತಾರೆ ನಿರ್ದೇಶಕ.
ಜೂನ್ ೯ಕ್ಕೆ ಕಲ್ಪನಾ-೨ ಸಿನೆಮಾದ ಆಡಿಯೋ ಬಿಡುಗಡೆ ನಡೆಯಲಿದ್ದು ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಪ್ರಿಯಾಮಣಿ ಕೂಡ ಈ ಸಿನೆಮಾದ ನಾಯಕನಟಿಯಾಗಿ ಕೆಲಸ ಮಾಡಿದ್ದಾರೆ.
ಈಮಧ್ಯ ಉಪೇಂದ್ರ ಅವರು ತಮ್ಮ ಮತ್ತೊಂದು ಸಿನೆಮಾ 'ಮುಕುಂದ ಮುರಾರಿ' ಚಿತ್ರೀಕರಣ ಕೂಡ ಮುಗಿಸಿದ್ದಾರೆ. ಇನ್ನೊಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಉಳಿದಿದ್ದು, ಅದು ನಟ ಸುದೀಪ್ ಅವರೊಂದಿಗೆ ನಡೆಯಲಿದೆಯಂತೆ.
ಇವುಗಳ ಜೊತೆಜೊತೆಗೇ ಜೂನ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿರುವ 'ಉಪೇಂದ್ರ ಮತ್ತೆ ಹುಟ್ಟು ಬಾ, ಇಂತಿ ಪ್ರೇಮ' ಸಿನೆಮಾಗೆ ಉಪೇಂದ್ರ ಅಣಿಯಾಗುತ್ತಿದ್ದಾರೆ.