ಬೆಂಗಳೂರು: ಕನ್ನಡ ಚಿತ್ರರಂಗದಿಂದ ಸ್ವಲ್ಪ ಕಾಲದವರೆಗೆ ವಿರಾಮ ಪಡೆದು ತಮಿಳು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ದೀಪಾ ಸನ್ನಿಧಿ ಹಿಂದಿರುಗಿದ್ದಾರೆ.
ದರ್ಶನ್ ಅಭಿನಯದ 'ಚಕ್ರವರ್ತಿ' ಸಿನೆಮಾದಲ್ಲಿ ನಾಯಕನಟಿಯ ಅವಕಾಶ ಪಡೆದಿದ್ದಾರೆ. ಈ ಹಿಂದೆ ೨೦೧೧ರಲ್ಲಿ ದರ್ಶನ್ ಜೊತೆಗೆ 'ಸಾರಥಿ' ಸಿನೆಮಾದಲ್ಲೂ ದೀಪಾ ನಟಿಸಿದ್ದರು. ಐದು ವರ್ಷಗಳ ನಂತರ ದರ್ಶನ್ ಅವರೊಂದಿಗೆ ನಟಿಸುತ್ತಿರುವುದು ಮನೆಗೆ ಹಿಂತಿರುಗುತ್ತಿರುವ ಅನುಭವ ಎನ್ನುವ ನಟಿ "ದರ್ಶನ್ ಜೊತೆಗೆ ಮತ್ತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ನನ್ನ ಪಯಣ ಪ್ರಾರಂಭಿಸಿದ್ದು ಅವರೊಂದಿಗೆ" ಎನ್ನುತ್ತಾರೆ. "ನಾನು ಕೆಲವೊಂದು ತಪ್ಪುಗಳನ್ನು ಮಾಡಿದ್ದೇನೆ ಆದರೆ ತಿದ್ದಿಕೊಂಡಿದ್ದೇನೆ. ಮತ್ತೆ ಅವಕಾಶ ಸಿಕ್ಕಿರುವುದು ವರದಂತೆ ಈಗ ಕಲಿತಿರುವುದನ್ನೆಲ್ಲಾ ಪಣಕ್ಕೆ ತೊಟ್ಟು ಮತ್ತೆ ಪ್ರಾರಂಭಿಸಬಹುದು" ಎನ್ನುತ್ತಾರೆ ನಟಿ.
'ಸಾರಥಿ'ಯಿಂದಲೇ ನನಗೆ 'ಪರಮಾತ್ಮ', 'ಜಾನು', 'ಸಕ್ಕರೆ' ಮತ್ತು 'ಎಂದೆಂದಿಗೂ ನಿನಗಾಗಿ' ಸಿನೆಮಾಗಳಲ್ಲಿ ನಟಿಸಲು ಸಾಧ್ಯವಾಗಿದ್ದು ನಂತರ ತಮಿಳು ಚಿತ್ರರಂಗಕ್ಕೆ ತೆರಳಿ ಅಲ್ಲಿ ಎರಡು ಚಿತ್ರಗಳಲ್ಲಿ ನಟಿಸಿದೆ ಎನ್ನುತಾರೆ ನಟಿ. ಅಧಿಕೃತವಾಗಿ ತರುಣ್ ಅವರ 'ಚೌಕ'ದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಹಿಂದಿರುಗಿದ್ದು, ತಾವು ಮಾಡಿರುವ ಕೆಲಸ ಫಲ ನೀಡಿದೆ, ಅದಕ್ಕಾಗಿಯೇ ನನ್ನನ್ನು 'ಚಕ್ರವರ್ತಿ'ಗೆ ಆಯ್ಕೆ ಮಾಡಿರುವುದು ಎನ್ನುತ್ತಾರೆ. "ಒಳ್ಳೆಯ ಕೆಲಸ ಮಾಡಿದಾಗ ಗೌರವ ಸಿಕ್ಕೇ ಸಿಗುತ್ತದೆ. ನಾನೇ ಯೋಜನೆಗಳನ್ನು ಹುಡುಕಿ ಹೋಗುವುದನ್ನು ನಿಲ್ಲಿಸಿದ್ದೇನೆ, ಆದರೆ ನನ್ನ ಬಳಿಗೆ ಬಂದದ್ದನ್ನು ಅಪ್ಪಿಕೊಳ್ಳುತ್ತೇನೆ. ಬರದೇ ಹೋದರೂ ಸರಿ, ಚಿತ್ರರಂಗ ಕೆಲಸ ಮಾಡುವುದೇ ಹಾಗೆ" ಎನ್ನುತ್ತಾರೆ ದೀಪಾ.
ದೊಡ್ಡ ಬ್ಯಾನರ್ ಸಿನೆಮಾಗಳಷ್ಟೇ ನನ್ನ ಆಸಕ್ತಿ ಎಂದೇನಲ್ಲ ಎನ್ನುವ ದೀಪಾ "'ಲವ್ ಚುರುಮುರಿ'ಯಲ್ಲಿ ನಟಿಸಬೇಕಿತ್ತು. ಅದು ಪ್ರಾರಂಭವಾಗಲೇ ಇಲ್ಲ. ಸ್ಕ್ರಿಪ್ಟ್ ಮತ್ತು ಚಿತ್ರತಂಡ ಚೆನ್ನಾಗಿದ್ದರೆ ನಟಿಸಲು ನನಗೆ ಅಭ್ಯಂತರವೇನಿಲ್ಲ" ಎನ್ನುತ್ತಾರೆ.
ಸಿನೆಮಾದ ಕೆಲಸ ಇಲ್ಲದಿದ್ದಾಗೆ ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸುವ ದೀಪಾ "ಸಿನೆಮಾ ಅಲ್ಲದೆ ಸೃಜನಶೀಲವಾದದ್ದನ್ನು ಮಾಡುವ ತುಡಿತ ಇದ್ದೇ ಇದೆ. ಹೀಗೆ ನಾನು ಸಮತೋಲನ ಕಾಪಾಡಿಕೊಳ್ಳುತ್ತೇನೆ" ಎನ್ನುತ್ತಾರೆ.