ಮುಕುಂದ ಮುರಾರಿ ಚಿತ್ರದ ದೃಶ್ಯ
ಹಿಂದಿಯ ಓ ಮೈ ಗಾಡ್ ಚಿತ್ರದ ರಿಮೇಕ್ ಆದ ಕನ್ನಡದಲ್ಲಿ ಇತ್ತೀಚೆಗೆ ತೆರೆಕಂಡ ಮುಕುಂದ ಮುರಾರಿ ಸಿನಿಮಾದಲ್ಲಿ ಮುರಾರಿಯಾಗಿ ನಟಿಸಿದ್ದ ಸುದೀಪ್ ಓಡಿಸಿದ್ದ ಬುಲೆಟ್ ಬೈಕ್ ನ ಹರಾಜಿಗಿಡಲಾಗುತ್ತಿದೆ.
ಚಿತ್ರಕ್ಕಾಗಿಯೇ ಮುಂಬೈ ಶಾಪರ್ಸ್ ಕಂಪೆನಿ 11 ಲಕ್ಷ ರೂಪಾಯಿ ವೆಚ್ಚದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿತ್ತು. ಇದೀಗ ನವೆಂಬರ್ 11ರಂದು ಬೈಕ್ ನ್ನು ಹರಾಜು ಮಾಡಲಾಗುತ್ತದೆ.
ಮುಕುಂದ ಮುರಾರಿ ಚಿತ್ರದ ವಿತರಕ ಜಾಕ್ ಮಂಜು ಅವರ ಸಲಹೆ ಮೇರೆಗೆ ಬೈಕ್ ನ್ನು ಹರಾಜಿಗೆ ಇಡಲಾಗುತ್ತಿದ್ದು ಅದರಿಂದ ಬಂದ ಹಣವನ್ನು ತುಮಕೂರಿನ ಸಿದ್ದಗಂಗಾ ಮಠಕ್ಕೆ ಮಕ್ಕಳ ಅನ್ನದಾಸೋಹ ಕಾರ್ಯಕ್ರಮಕ್ಕೆ ನೀಡಲು ಚಿತ್ರತಂಡ ನಿರ್ಧರಿಸಿದೆ.
ಬುಲೆಟ್ ಬೈಕ್ ನ್ನು ಬೆಂಗಳೂರಿನ ಮೇನಕಾ ಚಿತ್ರಮಂದಿರದ ಎದುರು ನಿನ್ನೆಯಿಂದ ಪ್ರದರ್ಶನಕ್ಕೆ ಇಡಲಾಗಿತ್ತು. ಇಂದು ಮೈಸೂರು ಕಡೆಗೆ ಪ್ರಯಾಣ ಬೆಳೆಸಲಿದ್ದು ನಂತರ ಶಿವಮೊಗ್ಗ, ಹುಬ್ಬಳ್ಳಿ, ದಾವಣಗೆರೆ ಮತ್ತು ತುಮಕೂರುಗಳಲ್ಲಿ ಚಿತ್ರಮಂದಿರಗಳ ಮುಂದೆ ಸಂಚರಿಸಿ ಮತ್ತೆ ಮೇನಕಾ ಚಿತ್ರಮಂದಿರದ ಎದುರು ನವೆಂಬರ್ 9 ಮತ್ತು 10 ರಂದು ಪ್ರದರ್ಶನಕ್ಕೆ ನಿಲ್ಲಲಿದೆ. ಬೈಕ್ ನ ಹರಾಜು ನವೆಂಬರ್ 11ರಂದು ಬೆಳಗ್ಗೆ 11 ಗಂಟೆಯಿಂದ 12 ಗಂಟೆಯವರೆಗೆ 1 ಗಂಟೆ ಕಾಲ ನಡೆಯಲಿದೆ ಎಂದು ಮಾಹಿತಿ ನೀಡಿದರು ಜಾಕ್ ಮಂಜು.
ಚಿತ್ರವನ್ನು ವೀಕ್ಷಿಸಿದ ಸುದೀಪ್ ಮತ್ತು ಉಪೇಂದ್ರ ಅಭಿಮಾನಿಗಳು ಬೈಕ್ ನ್ನು ಖರೀದಿಸಲು ಉತ್ಸುಕತೆ ತೋರಿಸುತ್ತಿದ್ದರು. ಆಗ ನಮಗೆ ಹರಾಜಿಗಿಟ್ಟರೆ ಹೇಗೆ ಎಂಬ ಯೋಚನೆ ಹೊಳೆಯಿತು. ಕೋದಂಡ ಎಂಬ ವ್ಯಕ್ತಿ ಈಗಾಗಲೇ ಅದನ್ನು 2 ಲಕ್ಷಕ್ಕೆ ಖರೀದಿಸಲು ಮುಂದೆ ಬಂದಿದ್ದಾರೆ. ಆದರೆ ನಾವು ನವೆಂಬರ್ 11ರವರೆಗೆ ಕಾಯುತ್ತೇವೆ ಎನ್ನುತ್ತಾರೆ ವಿತರಕರು.
ಈ ಮಧ್ಯೆ ಚಿತ್ರವನ್ನು ಮಹಿಳಾ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ ಎನ್ನುತ್ತಾರೆ ಚಿತ್ರ ನಿರ್ಮಾಪಕರು. ಉಪೇಂದ್ರ-ಸುದೀಪ್ ಕಾಂಬಿನೇಷನ್ ನ ಚಿತ್ರವನ್ನು ವೀಕ್ಷಿಸಲು ಹೆಚ್ಚೆಚ್ಚು ಮಹಿಳಾ ಪ್ರೇಕ್ಷಕರು ಥಿಯೇಟರ್ ಗಳತ್ತ ಧಾವಿಸುತ್ತಿದ್ದಾರಂತೆ.