'ರಾಮಾ ರಾಮಾ ರೇ' ಸಿನೆಮಾದ ಸ್ಟಿಲ್
ಬೆಂಗಳೂರು: ಎರಡು ವಾರಗಳ ಹಿಂದೆ ಅತಿ ಹೆಚ್ಚು ಪ್ರಚಾರವಿಲ್ಲದೆ ಬಿಡುಗಡೆಯಾದರೂ ಪ್ರೇಕ್ಷಕರ ಮತ್ತು ವಿಮರ್ಶಕರ ಸಮಾನ ಗಮನ ಸೆಳೆದು ಯಶಸ್ವಿಯಾಗಿದ್ದ 'ರಾಮಾ ರಾಮಾ ರೇ' ಸಿನೆಮಾ, ಗಾಂಧಿನಗರದ ಗಣ್ಯರಿಂದಲೂ ಪ್ರಶಂಸೆಗೆ ಒಳಗಾಗಿದೆ. ಈಗ ಈ ಸಿನೆಮಾವನ್ನು ಇನ್ನಷ್ಟು ಜನಪ್ರಿಯಗೊಳಿಸಲು ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಮುಂದೆ ಬಂದಿದ್ದು, 'ರಾಮಾ ರಾಮಾ ರೇ ಹಿಪ್ ಹಿಪ್ ಹುರ್ರೇ' ಎಂಬ ಹಾಡು ರಚಿಸಿ ಒಳ್ಳೆಯ ಸಿನೆಮಾಗಳನ್ನು ಬೆಂಬಲಿಸಿ ಎಂದಿದ್ದಾರೆ.
"ನಾವು ಮೊದಲಿಗೆ ಆಡಿಯೋ ಹಾಡನ್ನು ಬಿಡುಗಡೆ ಮಾಡುವ ಇರಾದೆ ಹೊಂದಿದ್ದೆವು, ಆದರೆ 'ಸಿನೆಮಾ ಟಾಕೀಸ್' ತಂಡ ವಿಡಿಯೋ ಚಿತ್ರೀಕರಣ ಮಾಡಿ ಬಿಡುಗಡೆ ಮಾಡಿದ್ದು ಅದು ವೈರಲ್ ಆಗಿದೆ" ಎನ್ನುತ್ತಾರೆ 'ರಾಮಾ ರಾಮಾ ರೇ' ಮೂಲಕ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ ಡಿ ಸತ್ಯಪ್ರಕಾಶ್.
"ಯೋಗರಾಜ್ ಭಟ್ ಅವರು ನಮಗೆ ಕ್ಲೈಮ್ಯಾಕ್ಸ್ ಹಾಡು ಬರೆಯಬೇಕಿತ್ತು. ಆದರೆ ಕಾರ್ಯನಿರತ ಚಟುವಟಿಕೆಗಳಿಂದ ನಮಗೆ ಅವರು ಬರೆಯಲು ಸಾಧ್ಯವಾಗಲಿಲ್ಲಿ. ಇತ್ತೀಚಿಗೆ ಅವರನ್ನು ಒಂದು ಕಾರ್ಯಕ್ರಮದಲ್ಲಿ ಭೇಟಿ ಮಾಡಿದಾಗ, ಸಿನೆಮಾ ಪ್ರಚಾರಕ್ಕೆ ಒಂದು ಹಾಡು ಬರೆದುಕೊಡುವುದಾಗಿ ಹೇಳಿ ನನ್ನನ್ನು ಅವರ ಕಚೇರಿಗೆ ಕೊಂಡೊಯ್ದು ಈ ಹಾಡು ಬರೆದುಕೊಟ್ಟರು. ಇದು ಅವರ ವಿನಯವಂತಿಕೆ ತೋರಿಸುತ್ತದೆ" ಸಿನೆಮಾ ರಂಗದ ಉತ್ತೇಜನ ನಮಗೆ ಬಹಳ ಸಹಾಯ ಮಾಡಿದೆ ಎನ್ನುತ್ತಾರೆ ಸತ್ಯ.
"ನಾವು ಯಾವುದೇ ನಿರೀಕ್ಷೆಗಳಿಲ್ಲದೆ ಬಿಡುಗಡೆ ಮಾಡಿದೆವು ಆದರೆ ಜನ ಒಂದಕ್ಕಿಂತಲೂ ಹೆಚ್ಚು ಬಾರಿ ಸಿನೆಮಾ ನೋಡಿ ಪ್ರೋತ್ಸಾಹಿಸುತ್ತಿದ್ದಾರೆ. ಇಡೀ ಕುಟುಂಬ ಮತ್ತು 60 ರಿಂದ 70 ವಯಸ್ಸಿನ ಜನರು ಕೂಡ ಸಿನೆಮಾ ನೋಡುತ್ತಿದ್ದಾರೆ. ಎಷ್ಟೋ ಜನ 15 ವರ್ಷದ ನಂತರ ಸಿನೆಮಾ ನೋಡುತ್ತಿರುವುದಾಗಿ ತಿಳಿಸುತ್ತಿದ್ದಾರೆ. ಇದು ನನಗೆ ಎರಡನೇ ಸಿನೆಮಾ ಮಾಡಲು ಹುರುಪು ತುಂಬಿದೆ. ಒಳ್ಳೆಯ ಸಿನೆಮಾಗಳು ನಿಲ್ಲುತ್ತವೆ ಎಂಬ ಭರವಸೆ ನೀಡಿದೆ" ಎನ್ನುತ್ತಾರೆ ನಿರ್ದೇಶಕ.
ಕೇವಲ 26 ತೆರೆಗಳಲ್ಲಿ ಬಿಡುಗಡೆಯಾದ ಈ ಚಿತ್ರ ಈಗ ಅದರ ದುಪ್ಪಟ್ಟು ತೆರೆಗಳಲ್ಲಿ ಪ್ರದರ್ಶನ ಕಾಣುತ್ತಿದೆಯಂತೆ. "ಇಲ್ಲಿಯವರೆಗೂ ನಮ್ಮ ಸಿನೆಮಾ ಬೆಂಗಳೂರು ಮತ್ತು ಮೈಸೂರಿನಲ್ಲಿ ಮಾತ್ರ ಪ್ರದರ್ಶನ ಕಾಣುತ್ತಿತ್ತು. ಇತ್ತೀಚಿಗೆ ಹುಬ್ಬಳ್ಳಿ ಮತ್ತು ದಾವಣಗೆರೆಯ ಚಿತ್ರಮಂದಿರ ಮಾಲೀಕರು ನಮ್ಮ ಸಿನೆಮಾ ಪ್ರದರ್ಶಿಸುವ ಆಸಕ್ತಿ ತೋರಿಸುತ್ತಿದ್ದಾರೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಕೂಡ ನಮ್ಮ ಸಿನೆಮಾದ ಪ್ರದರ್ಶನ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ" ಎನ್ನುತ್ತಾರೆ ನಿರ್ದೇಶಕ.
ಸದ್ಯಕ್ಕೆ ಎನ್ ಎಫ್ ಡಿ ಸಿ ಸಿನೆಮೋತ್ಸವಕ್ಕೆ 'ರಾಮಾ ರಾಮಾ ರೇ' ಆಯ್ಕೆಯಾಗಿದ್ದು, "ಕರ್ನಾಟಕದಲ್ಲಿ ಪ್ರಚಾರ ಮುಗಿಸಿದ ಮೇಲೆ ಸಿನೆಮೋತ್ಸವಗಳ ಬಗ್ಗೆ ಆಸಕ್ತಿ ವಹಿಸುತ್ತೇನೆ" ಎನ್ನುತ್ತಾರೆ ಸತ್ಯ.
ಯೋಗರಾಜ್ ಭಟ್ ಬರೆದ ಪ್ರಚಾರ ಹಾಡನ್ನು ಇಲ್ಲಿ ವೀಕ್ಷಿಸಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos