ಬೆಂಗಳೂರು: ಹೊಸ ನಟರನ್ನು ಕನ್ನಡ ಚಿತ್ರರಂಗ ಬೆಚ್ಚಗೆ ಅಪ್ಪಿಕೊಳ್ಳುತ್ತಿದೆ. ಪ್ರೀತಮ್ ಗುಬ್ಬಿ ನಿರ್ದೇಶನದ 'ನಾನು ಮತ್ತು ವರಲಕ್ಷ್ಮಿ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಿರುವ 6.3 ಅಡಿ ಎತ್ತರ ಪೃಥ್ವಿ, ಈ ಸಿನೆಮಾ ಬಿಡುಗಡೆಗೆ ಮುಂಚಿತವಾಗಿಯೇ ಎರಡನೇ ಸಿನೆಮಾದ ಅವಕಾಶ ಪಡೆದಿದ್ದಾರೆ.
'ನಾನು ಮತ್ತು ವರಲಕ್ಷ್ಮಿ' ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾದಾಗಲಿಂದಲೂ, ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ಅವರ ಮೊಮ್ಮಗ ಪೃಥ್ವಿ ಎಲ್ಲ ಕಡೆಯಿಂದ ಮೆಚ್ಚುಗೆ ಗಳಿಸುತ್ತಿದ್ದಾರೆ ಮತ್ತು ನಿರ್ದೇಶಕರ ಗಮನ ಸೆಳೆದಿದ್ದಾರೆ.
ಈಗ ಎರಡನೇ ಸಿನೆಮಾದ ಸಿದ್ಧತೆ ನಡೆಸಿದ್ದು, ತಾರೆಯರ ನಡುವೆ ನವೆಂಬರ್ 9 ರಂದು ಈ ಚಿತ್ರದ ಮುಹೂರ್ತ ನೆರವೇರಲಿದೆ ಮತ್ತು ನವೆಂಬರ್ 23 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನುತ್ತವೆ ಮೂಲಗಳು.
ಈ ಹಿಂದೆ ವಿಷ್ಣುವರ್ಧನ್ ಮತ್ತು ಸುಹಾಸಿನಿ ನಟಿಸಿದ್ದ 'ಮುತ್ತಿನ ಹಾರ' ಶೀರ್ಷಿಕೆಯನ್ನು ಈ ಚಿತ್ರತಂಡ ಮತ್ತೆ ಬಳಸಿಕೊಳ್ಳುತ್ತಿರುವುದು ವಿಶೇಷ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರ 1990 ರಲ್ಲಿ ಬಿಡುಗಡೆಯಾಗಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು.
ಪೃಥ್ವಿ ಅವರ ಈ ಹೊಸ ಚಿತ್ರದ ವಿವರಗಳನ್ನಾಗಲಿ ಮತ್ತು ಹಳೆಯ ಚಿತ್ರಕ್ಕೂ ಈ ಚಿತ್ರಕ್ಕೂ ಇರುವ ಸಂಬಂಧವನ್ನಾಗಲಿ ಬಿಟ್ಟುಕೊಡದ ನಿರ್ಮಾಣ ಸಂಸ್ಥೆ, "ಈ ಸಿನೆಮಾಗೆ ರಿಷಿ ಎಂಬ ಹೊಸ ನಿರ್ದೇಶಕನನ್ನು ಆಯ್ಕೆ ಮಾಡಲಾಗಿದೆ" ಎನ್ನುತ್ತವೆ ಮೂಲಗಳು.
ಈಮಧ್ಯೆ 'ನಾನು ಮತ್ತು ವರಲಕ್ಷ್ಮಿ' ಚಿತ್ರತಂಡ ನವೆಂಬರ್ 25 ಕ್ಕೆ ಸಿನೆಮಾ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು ಬೈಕ್ ರೇಸಿಂಗ್ ಬಗೆಗೆ ಮೊದಲ ಭಾರತೀಯ ಚಿತ್ರ ಎಂದು ಹೇಳಲಾಗುತ್ತಿದ್ದು ಮಾಳವಿಕಾ ಮೋಹನ್ ಕೂಡ ಈ ಸಿನೆಮಾದ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಪ್ರಕಾಶ್ ರಾಜ್, ಮಧೂ, ರಂಗಾಯಣ ರಘು ಕೂಡ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದು, ವಿ ಹರಿಕೃಷ್ಣ ಅವರ ಸಂಗೀತ ಸಿನೆಮಾಗಿದೆ.