ಮುಕುಂದ ಮುರಾರಿ ಸಿನೆಮಾದ ಸ್ಟಿಲ್
ಬೆಂಗಳೂರು: ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ನಡೆಗೆ ಇಡೀ ದೇಶ ಇನ್ನೂ ಹೊಂದಿಕೊಳ್ಳಲು ಒದ್ದಾಡುತ್ತಿರುವಾಗ, ಅದರ ಬಿಸಿ ಕನ್ನಡ ಚಿತ್ರರಂಗಕ್ಕೂ ತಟ್ಟಿದೆ. ಕೆಲವರು ಇದು 'ಅಸೂಕ್ಷ್ಮ' ನಡೆ ಎಂದರೂ, ಚಿತ್ರರಂಗದ ಬಹುತೇಕ ಮಂದಿ ಈ ನಿರ್ಧಾರವನ್ನು ಸ್ವಾಗತಿಸಿ ಅದಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ.
ಸರಾಗವಾಗಿ ಮುನ್ನಡೆಯುತ್ತಿರುವ 'ಚಕ್ರವರ್ತಿ'
ಕೇಂದ್ರ ಸರ್ಕಾರದ ನೀತಿಯಿಂದ ಕೆಲವು ನಿರ್ಮಾಪಕರ ಕೈಕಟ್ಟಿ ಹಾಕಿದ್ದರೂ, ದರ್ಶನ್ ಅಭಿನಯದ 'ಚಕ್ರವರ್ತಿ' ಕೆಲವು ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಮುನ್ನಡೆದಿದೆ. ನಿರ್ಮಾಪಕ ಅಣ್ಣಾಜಿ ನಾಗರಾಜ್ ತಾವು ಬದಲು ಮಾಡಿಕೊಂಡಿರುವ ಯೋಜನೆ ಬಗ್ಗೆ ತಿಳಿಸುತ್ತ "ಗುರುತಿನ ಚೀಟಿ ಇರುವ ನಮ್ಮ ಚಿತ್ರತಂಡದ ಕಾರ್ಮಿಕರು ಬ್ಯಾಂಕ್ ಗಳಲ್ಲಿ ಹಳೆಯ ನಗದನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ ಮತ್ತು ಬ್ಯಾಂಕ್ ಖಾತೆ ಹೊಂದಿರುವವರಿಗೆ ನಾವು ಚೆಕ್ ಗಳನ್ನು ನೀಡುತ್ತಿದ್ದೇವೆ. ಯಾವುದೇ ದಾಖಲೆ ಇಲ್ಲದವರಿಗೆ ಅವರ ದಿನದ ಸಂದಾಯವನ್ನು ೧೦೦ ರೂ ನೋಟುಗಳಲ್ಲಿ ನೀಡುತ್ತಿದ್ದೇವೆ. ಕೆಲಸ ಸರಾಗವಾಗಿ ನಡೆಯುತ್ತಿದೆ" ಎನ್ನುತ್ತಾರೆ.
"ನನ್ನ ಕೈನಲ್ಲಿ ಏನಿಲ್ಲ. ಕಾರ್ಮಿಕರು ಕೂಡ ಕಾನೂನನ್ನು ಅನುಸರಿಸಿ ಸಹಕರಿಸುತ್ತಿದ್ದಾರೆ. ಕೊನೆಗೆ ಅವರಿಗೆ ಬೇಕಾಗಿರುವುದು ಅವರು ಮಾಡಿದ ಕೆಲಸಕ್ಕೆ ಹಣ. ನಾನು ನಮ್ಮ ಕಡೆಯಿಂದ ಅದನ್ನು ಒದಗಿಸುತ್ತಿದ್ದೇವೆ" ಎನ್ನುತ್ತಾರೆ ಅಣ್ಣಾಜಿ.
ಆದರೆ ಇತ್ತೀಚಿಗೆ ಬಿಡುಗಡೆಯಾದ 'ಸಂತು ಸ್ಟ್ರೇಟ್ ಫಾರ್ವರ್ಡ್' ಮತ್ತು 'ಮುಕುಂದ ಮುರಾರಿ' ಸಿನೆಮಾಗಳು ತೊಂದರೆ ಅನುಭವಿಸುತ್ತಿವೆ. 'ಮುಕುಂದ ಮುರಾರಿ' ವಿತರಕ ಜಾಕ್ ಮಂಜು ಹೇಳುವಂತೆ "ಇದರಿಂದ ನನ್ನ ಇಡೀ ಪ್ರಚಾರ ತಂತ್ರಕ್ಕೆ ಪೆಟ್ಟು ಬಿದ್ದಿದೆ. ಬಿಡುಗಡೆಯಾದಾಗ ನಮಗೆ ಸಂತಸವಾಗಿತ್ತು, ಒಳ್ಳೆಯ ವ್ಯವಹಾರ ಮಾಡುವ ಭರವಸೆಯಿತ್ತು. ಈಗ ಲಾಭ ಇರಲಿ ನಷ್ಟವಾಗುವಂತೆ ತೋರುತ್ತಿದೆ. ನವೆಂಬರ್ ೯ ರಿಂದ ಜನ ಚಿತ್ರಮಂದಿರಗಳತ್ತ ತಲೆ ಹಾಕಿಲ್ಲ. ಜನರಿಗೆ ಅವರದ್ದೇ ತೊಂದರೆಗಳಿವೆ. ಅವರು ಸಿನೆಮಾಗಳನ್ನು ಮರೆತಿದ್ದಾರೆ. ಇಡೀ ದೇಶಕ್ಕೆ ಆಗಿರುವುದು ನಮಗೂ ಆಗಿದೆ. ಒಳ್ಳೆಯ ಭಾರತಕ್ಕಾಗಿ ನಾವು ತೊಂದರೆಗಳನ್ನು ಎದುರಿಸಬೇಕಿದೆ. ಆದರೆ ಸಿನೆಮಾ ವ್ಯವಹಾರಕ್ಕಂತೂ ಪೆಟ್ಟು ಬಿದ್ದಿದೆ" ಎನ್ನುತ್ತಾರೆ.
ಅಂತರ್ಜಾಲ ಮತ್ತು ವಾರದ ಪಾವತಿಗೆ ಮುಂದಾದ 'ಟಗರು' ತಂಡ
ನವೆಂಬರ್ ೧೮ ರಿಂದ ಸೂರಿ ನಿರ್ದೇಶನದ, ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರೀಕರಣ ಪ್ರಾರಂಭಿಸಬೇಕಿದೆ. ಇದಕ್ಕಾಗಿ ನಿರ್ಮಾಪಕ ಕೆಪಿ ಶ್ರೀಕಾಂತ್ ಯೋಜನೆಯನ್ನು ಹಾಕಿಕೊಂಡಿದ್ದಾರೆ. "ನಾವು ಎಲ್ಲ ವಿಭಾಗದ ಮುಖ್ಯಸ್ಥರಿಗೆ ಚೆಕ್ ಗಳನ್ನೂ ನೀಡುತ್ತಿದ್ದೇವೆ, ನಾವು ಸಾಮಾನ್ಯವಾಗಿ, ನಿರ್ಮಾಣ ತಂಡ, ಊಟ-ತಿಂಡಿ ವ್ಯವಸ್ಥೆ ಮಾಡುವವರಿಗೆ, ಮೇಕಪ್ ನವರಿಗೆ ಪ್ರತಿ ದಿನ ಹಣ ಪಾವತಿಸುತ್ತೇವೆ, ಆದರೆ ಈಗ ಪ್ರತಿ ವಾರ ಹಣ ನೀಡುವ ಒಪ್ಪಂದವಾಗಿದೆ. ಆ ವಿಭಾಗದಲ್ಲಿನ ಮುಖ್ಯಸ್ಥರಿಗೆ ಇದಕ್ಕಾಗಿ ಮನವಿ ಮಾಡಿದ್ದೇವೆ. ನಾವು ಕಾನೂನು ಬದಲಿಸಲು ಸಾಧ್ಯವಿಲ್ಲ, ಅದಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಚಿತ್ರರಂಗ ಸಹಜಸ್ಥಿತಿಗೆ ಬರಲು ನಾಲ್ಕು ತಿಂಗಳುಗಳಾದರೂ ಬೇಕು, ಆದರೂ ನಾವು ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ" ಎನ್ನುತ್ತಾರೆ ಶ್ರೀಕಾಂತ್.