ಅಮೆರಿಕಾದ ಗಾಯಕ ಗೀತರಚನಾಕಾರ ಬಾಬ್ ಡೈಲಾನ್
ಸ್ಟಾಕ್ ಹಾಂ: ನೊಬೆಲ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಗೈರು ಹಾಜರಾಗಲು, ಅಮೆರಿಕಾದ ಗಾಯಕ ಗೀತರಚನಾಕಾರ ಬಾಬ್ ಡೈಲಾನ್ ನಿರ್ಧರಿಸಿದ್ದಾರೆ ಎಂದು ಸ್ವೀಡಿಷ್ ಅಕಾಡೆಮಿ ಘೋಷಿಸಿದೆ. ಕಳೆದ ತಿಂಗಳಷ್ಟೇ ಇವರಿಗೆ ೨೦೧೬ ರ ಸಾಹಿತ್ಯಿಕ ನೊಬೆಲ್ ಪ್ರಶಸ್ತಿ ಘೋಷಿಸಲಾಗಿತ್ತು.
"ಅವರೇ ಬರೆದಿರುವ ವೈಯಕ್ತಿಕ ಪತ್ರದಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮಗಳಿಂದ ಡಿಸೆಂಬರ್ ನಲ್ಲಿ ನಡೆಯುವ ನೊಬೆಲ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕಾಗಿ ಸ್ಟಾಕ್ ಹಾಂ ಗೆ ಬರಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಅವರಿಗೆ ಈ ಪ್ರಶಸ್ತಿಯ ಬಗ್ಗೆ ಗೌರವಿದೆ ಎಂದು ತಿಳಿಸಿದ್ದು, ಅವನ್ನು ವೈಯಕ್ತಿಕವಾಗಿ ಸ್ವೀಕರಿಸುವುದಾಗಿ ತಿಳಿಸಿದ್ದಾರೆ" ಎಂದು ಅಕಾಡೆಮಿ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
"ನೊಬೆಲ್ ಲಾರೆಟ್ ಗಳು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳುವುದು ಸಾಮಾನ್ಯವಲ್ಲ ಆದರೆ ಇದು ಇದು ಮೊದಲೇನಲ್ಲ" ಎಂದು ಹೇಳಿರುವ ಸ್ವೀಡಿಷ್ ಅಕಾಡೆಮಿ "ಆ ಪ್ರಶಸ್ತಿ ಬಾಬ್ ಡೈಲಾನ್ ಅವರಿಗೆ ಸೇರಿದ್ದು" ಎಂದಿದೆ.
"ನಾವು ಬಾಬ್ ಡೈಲಾನ್ ಅವರ ನೊಬೆಲ್ ಪ್ರಶಸ್ತಿ ಸ್ವೀಕಾರ ಭಾಷಣಕ್ಕಾಗಿ ಎದುರು ನೋಡುತ್ತಿದ್ದೇವೆ. ಅದೊಂದೇ ನಮ್ಮ ಬೇಡಿಕೆ, ಡಿಸೆಂಬರ್ ೧೦ ೨೦೧೬ ರಿಂದ ಆರು ತಿಂಗಳೊಳಗೆ ನಮಗೆ ಅದು ದೊರೆಯಬೇಕಿದೆ" ಎಂದು ಕೂಡ ಅಕಾಡೆಮಿ ಹೇಳಿದೆ.