'ಬದ್ಮಾಶ್' ನಿರ್ದೇಶಕ ಆಕಾಶ್ ಶ್ರೀವತ್ಸ
ಬೆಂಗಳೂರು: ಎಂಜಿನಿಯರಿಂಗ್ ಪದವೀಧರರು ಅನ್ಯ ಕ್ಷೇತ್ರಗಳಲ್ಲಿ ಮಿಂಚುವುದು ಇತ್ತೀಚಿಗೆ ಸರ್ವೇ ಸಾಮಾನ್ಯವಾಗಿರುವ ಸಮಯದಲ್ಲಿ, ಕನ್ನಡ ಚಿತ್ರರಂಗ ಕೂಡ ಸಿನೆಮಾ ಕಲೆಯ ಬಗ್ಗೆ ತೀವ್ರಾಸಕ್ತಿ ಇರುವ ಎಂಜಿನಿಯರ್ ಗಳನ್ನು ಕರೆದು ಅಪ್ಪಿಕೊಂಡಿರುವುದು ವಿಶೇಷ.
ಈ ಸಂಖ್ಯೆ ದಿನೇ ದಿನಕ್ಕೆ ಹೆಚ್ಚುತ್ತಿದೆ ಕೂಡ. 'ಬದ್ಮಾಶ್' ಚಿತ್ರತಂಡದಲ್ಲೇ ೧೧ ಜನ ಎಂಜಿನಿಯರ್ ಗಳಿದ್ದಾರೆ. ನಿರ್ದೇಶಕ ಆಕಾಶ್ ಶ್ರೀವತ್ಸ, ನಟ ಧನಂಜಯ್, ನಿರ್ಮಾಪಕ ರವಿ ಕಶ್ಯಪ್, ಸ್ಕ್ರೀನ್ ಪ್ಲೆ ಬರಹಗಾರ ಸಂತೋಷ್, ಸಂಭಾಷಣಕಾರ ವಿನೋದ್ ಪ್ರತೀಕ್, ಕಾರ್ಯಕಾರಿ ನಿರ್ಮಾಪಕರಾದ ಮಹೇಶ್, ವಿವೇಕ್, ನಾಗಭೂಷಣ್, ಪ್ರಿಯಾಂಕ್ ಹಾಗು ಸಹ ನಿರ್ದೇಶಕ ಅನೂಪ್ ಇವರೆಲ್ಲರೂ ಎಂಜಿನಿಯರಿಂಗ್ ಪದವೀಧರರೇ!
"ನಾವು ಶಿಕ್ಷಣದ ಸಲುವಾಗಿ ಎಂಜಿನಿಯರಿಂಗ್ ಓದಿದೆವು. ಆದರೆ ನಮ್ಮ ಗುರಿಯೇ ಬೇರೆ ಇತ್ತು. ನಮ್ಮ ತಂಡದಲ್ಲಿ ಎಲ್ಲರೂ ತಮ್ಮ ಕನಸುಗಳ ಬೆನ್ನು ಹತ್ತಿರುವವರು" ಎನ್ನುತ್ತಾರೆ ನಿರ್ದೇಶಕ ಆಕಾಶ್.
"ನನ್ನ ಪದವಿ ಪರೀಕ್ಷೆಯ ಫಲಿತಾಂಶ ಬಂದ ದಿನದಿಂದಲೇ ನನ್ನ ಸಿನೆಮಾ ವೃತ್ತಿ ಜೀವನ ಪ್ರಾರಂಭಿಸಿದೆ. ೨೦೦೫ ರಲ್ಲಿ ನನಗೆ ನನ್ನ ಪಯಣದ ಬಗ್ಗೆ ಯಾವುದೇ ಗೊತ್ತು ಗುರಿಯಿರಲಿಲ್ಲ. ನಾನು ಗಾಂಧಿನಗರದಲ್ಲಿ ಅಲೆದಾಡುತ್ತಿದ್ದೆ. ಅಲ್ಲಿ ನಿರ್ಮಾಣ ತಂಡದ ಸಹಾಯಕನಾಗಿ ಸೇರಿಕೊಂಡೆ" ಎಂದು ನೆನಪಿಸಿಕೊಳ್ಳುತ್ತಾರೆ ನಿರ್ದೇಶಕ.
ನಟ-ನಿರ್ದೇಶಕ ಮತ್ತೊಬ್ಬ ಎಂಜಿನಿಯರ್ ರಮೇಶ್ ಅರವಿಂದ್ ತಮ್ಮ ಸಲಹೆಗಾರ ಮತ್ತು ಗಾಡ್ ಫಾದರ್ ಎಂದು ಕರೆದುಕೊಳ್ಳುವ ಆಕಾಶ್ "ಅವರಿಲ್ಲದೆ ಹೋಗಿದ್ದರೆ ನಾನಿಲ್ಲಿ ಇರುತ್ತಿರಲಿಲ್ಲ. ಅವರು ನಟ-ನಿದೇಶಕನಾಗಿ ನನಗೆ ಸಿನೆಮಾ ವ್ಯಾಕರಣ ಹೇಳಿಕೊಟ್ಟರು" ಎನ್ನುತ್ತಾರೆ.
'ಸುಳ್ಳೇ ಸತ್ಯ' ಸಿನೆಮಾದ ಮೂಲಕ ತಮ್ಮ ನಿರ್ದೇಶಕ ವೃತ್ತಿ ಜೀವನ ಪ್ರಾರಂಭಿಸಿದ ಆಕಾಶ್ ಅವರಿಗೆ 'ಬದ್ಮಾಶ್' ಮೊದಲ ಫೀಚರ್ ಸಿನೆಮಾ. ಇದಕ್ಕೆ ಅವರೇ ಚಿತ್ರಕಥೆ ರಚಿಸಿದ್ದು ಧನಂಜಯ್ ಮತ್ತು ಸಂಚಿತಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ.