ಪುಷ್ಕರ್ ಮಲ್ಲಿಕಾರ್ಜುನಯ್ಯ-ಹೇಮಂತ್ ರಾವ್-ಡ್ಯಾನಿಷ್ ಸೈಟ್
ಬೆಂಗಳೂರು: ಹಾಸ್ಯ ಭಾಷಣಕಾರ ಡ್ಯಾನಿಷ್ ಸೈಟ್ ಅವರಿಗೆ ಶ್ರೋತೃಗಳನ್ನು ನಗಿಸುವುದು ಕಾಯಕದ ಜೊತೆಗೆ ವೃತ್ತಿಧರ್ಮ ಕೂಡ. 'ಡಾ ಇಂಪ್ರೂವ್' ಎಂಬ ಅಂತರ್ಜಾಲ ಹಾಸ್ಯ ಪ್ರದರ್ಶನ ಷೋ ಮೂಲಕ ಪ್ರಖ್ಯಾತರಾಗಿದ್ದ ಡ್ಯಾನಿಷ್ ಈಗ ಬೆಳ್ಳಿತೆರೆಗೆ ಬರಲಿದ್ದಾರೆ. ಅವರು ಸೃಷ್ಟಿಸಿದ್ದ ನೊಗರಾಜ್ ಪಾತ್ರ ಹೆಚ್ಚಿನ ಜನಕ್ಕೆ ಈಗ ತಲುಪುವ ಸಾಧ್ಯತೆಯಿದೆ.
ಇವರ ಜನಪ್ರಿಯತೆಯನ್ನು ಗಮನಿಸಿದ್ದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ನಿರ್ಮಾಪಕರು, ಈಗ ಡ್ಯಾನಿಷ್ ಮತ್ತು ನಿರ್ದೇಶಕ ಸಾದ್ ಖಾನ್ ಜೊತೆಗೂಡಿ 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಎಂಬ ಹೆಸರಿನ ಸಿನೆಮಾ ನಿರ್ಮಿಸಲು ಮುಂದಾಗಿದ್ದಾರೆ. 'ಗೋಧಿ ಬಣ್ಣ.. ' ಸಿನೆಮಾದ ನಿರ್ದೇಶಕ ಹೇಮಂತ ರಾವ್ ಈ ಸಿನೆಮಾದ ನಿರ್ಮಾಪಕರಲ್ಲಿ ಒಬ್ಬರು. "ನನ್ನ ಚೊಚ್ಚಲ ಸಿನೆಮಾದ ರಿಮೇಕ್ ಹಕ್ಕುಗಳು ಮಾರಾಟ ಮಾಡಿದ್ದರಿಂದ ಬಂದ ಹಣವನ್ನು ಇಲ್ಲಿ ಹೂಡಲು ನಿಶ್ಚಯಿಸಿದೆ" ಎನ್ನುತ್ತಾರೆ ಅವರು.
ಈ ಸಿನೆಮಾ ಜನವರಿ ೨೦೧೭ ರಿಂದ ಚಿತ್ರೀಕರಣ ಪ್ರಾರಂಭಿಸಲಿದೆ. ನಿರ್ಮಾಪಕರು ಹೇಳುವಂತೆ ಇದು ರಾಜಕೀಯ ವ್ಯಂಗ್ಯ ಸಿನೆಮಾ ಅಂತೆ. "ಇದಕ್ಕೆ ಡ್ಯಾನಿಷ್ ಮತ್ತು ಸಾದ್ ಕಥೆ-ಚಿತ್ರಕಥೆ ರಚಿಸಿದ್ದಾರೆ. ಇದು ರಾಜಕೀಯ ವ್ಯಂಗ್ಯ ಮತ್ತು ನಗೆಯ ದಂಗೆಯನ್ನು ಎಬ್ಬಿಸಲಿದೆ. ನಮ್ಮ ಸುತ್ತಲಿನ ಸಾಮಾಜಿಕ ಸಮಸ್ಯೆಗಳನ್ನು ಹಾಸ್ಯದ ಮೂಲಕ ಚರ್ಚಿಸಲಿದೆ" ಎನ್ನುತ್ತಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್.