ಬೆಂಗಳೂರು: ತರುಣ್ ಸುಧೀರ್ ನಿರ್ದೇಶನದ ಚೊಚ್ಚಲ ಸಿನೆಮಾ ಹಲವು ಕಾರಣಗಳಿಗೆ ಕನ್ನಡ ಸಿನೆರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಕುತೂಹಲವನ್ನು ಕಾಯ್ದುಕೊಳ್ಳಲು ನಿರ್ಮಾಪಕರು ಡಿಸೆಂಬರ್ ೧ ಕ್ಕೆ ಟೀಸರ್ ಬಿಡುಗಡೆಗೆ ಮುಂದಾಗಿದ್ದಾರೆ.
"ಪಾತ್ರಗಳ ಮತ್ತೊಂದು ಬದಿಯನ್ನು ಟೀಸರ್ ತೆರೆದಿಡಲಿದೆ ಮತ್ತು ಪೋಸ್ಟರ್ ನಲ್ಲಿ ಕಂಡದ್ದಕ್ಕಿಂತ ವಿಭಿನ್ನವಾದದ್ದನ್ನು ಟೀಸರ್ ತೋರಿಸಲಿದೆ. ಸಿನೆಮಾದ ಕಂಟೆಂಟ್ ಬಗ್ಗೆ ಹೆಚ್ಚಿನ ಕುತೂಹಲ ಇದು ಮೂಡಿಸಲಿದೆ" ಎನ್ನುತ್ತಾರೆ ತರುಣ್.
ದ್ವಾರಕೀಶ್ ಚಿತ್ರ ನಿರ್ಮಾಣ ಸಂಸ್ಥೆಯ ೫೦ ನೆಯ ಚಿತ್ರ ಇದಾಗಿದ್ದು, ಪ್ರೇಮ್, ವಿಜಯ್ ರಾಘವೇಂದ್ರ, ದಿಗಂತ್, ಪ್ರಜ್ವಲ್, ಐಂದ್ರಿತಾ ರೇ, ಪ್ರಿಯಾಮಣಿ, ಭಾವನಾ, ದೀಪಾ ಸನ್ನಿಧಿ ಹೀಗೆ ದೊಡ್ಡ ತಾರಾದಂಡೆ ಅಭಿನಯಿಸಿದ್ದು, ದರ್ಶನ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾನ್ವಿತಾ ಹರೀಶ್ ಮತ್ತು ಕಾಶಿನಾಥ್ ಕೂಡ ನಟಿಸಿರುವ ಈ ಚಿತ್ರಕ್ಕೆ ತರುಣ್ ಅವರು ೨೫ ವಿಭಿನ್ನ ತಂತ್ರಜ್ಞರನ್ನು ಕೂಡ ಒಳಗೊಂಡಿದ್ದಾರೆ.
'ಸುಂದರಾಂಗ ಜಾಣ' ಮತ್ತು 'ಕಿರಿಕ್ ಪಾರ್ಟಿ'ಯಂತೆಯೇ 'ಚೌಕ' ಕ್ರಿಸ್ಮಸ್ ಸಮಯದಲ್ಲಿ ಡಿಸೆಂಬರ್ ೨೩ ರ ಬಿಡುಗಡೆಗೆ ಎದುರು ನೋಡುತ್ತಿದೆ.