ಬೆಂಗಳೂರು: ೨೦೦೮ ರಿಂದಲೂ ಕನ್ನಡ ನಟ ಪುನೀತ್ ರಾಜಕುಮಾರ್ ವರ್ಷಕ್ಕೆ ಎರಡು ಸಿನೆಮಾಗಳಂತೆ ನಟಿಸುತ್ತಾ ಬಂದಿದ್ದಾರೆ. ೨೦೧೭ ರಲ್ಲಿ ಅವರ ಮಹತ್ವಾಕಾಂಕ್ಷೆ ಹಿರಿದಾಗಿದೆ. ೨೦೧೬ ರಲ್ಲಿ 'ಚಕ್ರವ್ಯೂಹ' ಮತ್ತು 'ದೊಡ್ಮನೆ ಹುಡುಗ' ತೆರೆ ಕಂಡು ಯಶಸ್ಸು ಗಳಿಸಿದ ಮೇಲೆ ಈಗ ೨೦೧೭ ಕ್ಕೆ 'ರಾಜಕುಮಾರ'ನಿಂದ ಪ್ರಾರಂಭವಾಗಿ ನಾಲ್ಕು ದೊಡ್ಡ ಬ್ಯಾನರ್ ಸಿನೆಯಾಗಳಲ್ಲಿ ನಟಿಸಲು ಮುಂದಾಗಿದ್ದಾರೆ.
ಹೊಂಬಾಳೆ ಫಿಲಂಸ್ ನಿರ್ಮಿಸಿರುವ 'ರಾಜಕುಮಾರ' ಈಗ ಜನವರಿ ೩ ನೇ ವಾರದಲ್ಲಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಸಂತೋಷ್ ಆನಂದರಾಮ್ ನಿರ್ದೇಶನದ ಈ ಚಿತ್ರ ಈಗ ಡಬ್ಬಿಂಗ್ ಕಾರ್ಯದಲ್ಲಿ ನಿರತವಾಗಿದ್ದು, ಸಾಧು ಕೋಕಿಲಾ ಜೊತೆಗಿನ ಕೆಲವು ದೃಶ್ಯಗಳ ಚಿತ್ರೀಕರಣವಷ್ಟೇ ಬಾಕಿಯಿದೆ.
ಅಧಿಕೃತವಾಗಿ ಘೋಷಣೆಯಾಗಿರುವಂತೆ ಅವರ ಮುಂದಿನ ಸಿನೆಮಾ ತಮಿಳಿನ 'ಪೂಜೈ' ರಿಮೇಕ್. 'ಭಜರಂಗಿ' ಮತ್ತು 'ವಜ್ರಕಾಯ' ಖ್ಯಾತಿಯ ಎ ಹರ್ಷ ಇದನ್ನು ನಿರ್ದೇಶಿಸುತ್ತಿದ್ದು, ಜನವರಿ ಮಧ್ಯದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಮೂಲಗಳ ಪ್ರಕಾರ ಪವರ್ ಸ್ಟಾರ್ ನಂತರ ನಿರ್ಮಾಪಕ ಲಗದಾಪತಿ ಶ್ರೀಧರ್ ಅವರ ಯೋಜನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ.
"ಈ ಸಿನೆಮಾಗೆ ಪುನೀತ್ ಅಧಿಕೃತವಾಗಿ ಸಹಿ ಹಾಕಿದ್ದಾರೆ. ಶೀಘ್ರದಲ್ಲೇ ವಿವರಗಳನ್ನು ಘೋಷಿಸಲಾಗುತ್ತದೆ" ಎನ್ನುತ್ತವೆ ಮೂಲಗಳು.
ಹಾಗೆಯೇ ೨೦೧೭ ರಲ್ಲಿ ಮತ್ತೊಂದು ದೊಡ್ಡ ಬ್ಯಾನರ್ ಚಿತ್ರ 'ಜೇಮ್ಸ್' ಅನ್ನು ಪುನೀತ್ ಘೋಷಿಸಿಕೊಂಡಿದ್ದಾರೆ. "ಚೇತನ್ ಕುಮಾರ್ ಅವರ ಈ ಸ್ಕ್ರಿಪ್ಟ್ ಅನ್ನು ಪುನೀತ್ ಬಹಳ ಇಷ್ಟ ಪಟ್ಟಿದ್ದು, ಇದು ಮುಂದಿನ ವರ್ಷ ಅವರು ತೊಡಗಿಸಿಕೊಳ್ಳಲಿರುವ ಮತ್ತೊಂದು ಚಿತ್ರ" ಎನ್ನುತ್ತವೆ ಮೂಲಗಳು.
ಈಮಧ್ಯೆ ಗೌತಮ್ ಮೆನನ್ ಕೂಡ ಪುನೀತ್ ಜೊತೆಗೆ ಸಿನೆಮಾವೊಂದನ್ನು ಮಾಡಲಿದ್ದಾರೆ ಮತ್ತು ಸೂರಿ-ಪುನೀತ್ ಜೋಡಿ ಮತ್ತೆ ಒಂದಾಗಲಿದೆ ಎಂಬ ವದಂತಿಗಳು ಕೂಡ ಇವೆ. ಇದು ಸಾಧ್ಯವಾದರೆ 'ಜಾಕಿ', 'ಅಣ್ಣಾ ಬಾಂಡ್' ಮತ್ತು 'ದೊಡ್ಮನೆ ಹುಡುಗ' ನಂತರ ಈ ಜೋಡಿಯ ನಾಲ್ಕನೇ ಸಿನೆಮಾ ಇದಾಗಲಿದೆ.