ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ಅವರ ಮೊಮ್ಮಗ ನಟ ಪೃಥ್ವಿ ಕನ್ನಡ ಚಿತ್ರರಂಗದಲ್ಲಿ ನಿಧಾನಕ್ಕೆ ನೆಲೆಯೂರುತ್ತಿದ್ದಾರೆ. ಪ್ರೀತಮ್ ಗುಬ್ಬಿ ನಿರ್ದೇಶನದ 'ನಾನು ಮತ್ತು ವರಲಕ್ಷ್ಮಿ' ಸಿನೆಮಾದಲ್ಲಿ ಚೊಚ್ಚಲ ಬಾರಿಗೆ ನಾಯಕ ನಟನಾಗಿ ಹೊರಹೊಮ್ಮಿರುವ ಪೃಥ್ವಿ ಈಗ ತಮ್ಮ ಮೂರನೇ ಸಿನೆಮಾದಲ್ಲಿ ಕೂಡ ಪ್ರೀತಮ್ ಜೊತೆಗೂಡಲಿದ್ದಾರೆ ಎನ್ನುತ್ತವೆ ಮೂಲಗಳು.
ಈ ಯುವ ನಟ ಈಗಾಗಲೇ ತಮ್ಮ ಎರಡನೇ ಸಿನೆಮಾ 'ಮುತ್ತಿನ ಹಾರ'ದಲ್ಲೂ ನಟಿಸುತ್ತಿದ್ದು, ಹೊಂಬಾಳೆ ಫಿಲಂಸ್ ನಿರ್ಮಾಣದ ಸಿನೆಮಾಗೆ ಕೂಡ ಈಗ ಆಯ್ಕೆಯಾಗಿದ್ದಾರೆ. ಈ ಸಿನೆಮಾದ ನಿರ್ದೇಶಕ ಪ್ರೀತಮ್ ಗುಬ್ಬಿ ಎನ್ನುತ್ತವೆ ಮೂಲಗಳು.
ಮೂಲಗಳು ತಿಳಿಸುವಂತೆ ಸದ್ಯಕ್ಕೆ ಮಾತುಕತೆ ಜಾರಿಯಲ್ಲಿದ್ದು, ಎಲ್ಲವು ನಿಶ್ಚಯದಂತೆ ನೆರವೇರಿದರೆ, ಹೊಂಬಾಳೆ ಫಿಲಂಸ್ ಎರಡನೇ ಬಾರಿಗೆ ನಟ ಮತ್ತು ನಿರ್ದೇಶನನ್ನು ಜೊತೆಗೂಡಿಸಲಿದೆ. ಈ ನಿರ್ಮಾಣ ಸಂಸ್ಥೆ ಈ ಹಿಂದೆ ಪುನೀತ್ ರಾಜಕುಮಾರ್ ಅವರ 'ನಿನ್ನಿಂದಲೆ' ಮತ್ತು ಯಶ್ ಅವರ 'ಮಾಸ್ಟರ್ ಪೀಸ್' ಕೂಡ ನಿರ್ಮಿಸಿತ್ತು. ಈಗ ಪುನೀತ್ ಅವರ 'ರಾಜಕುಮಾರ' ಹಾಗು ಯಶ್ ಅವರ 'ಕೆಜಿಎಫ್' ಸಿನೆಮಾಗಳ ನಿರ್ಮಾಪಕರು ಕೂಡ.
ಈಮಧ್ಯೆ ಪೃಥ್ವಿ ಅವರ ಚೊಚ್ಚಲ ಚಿತ್ರ 'ನಾನು ಮತ್ತು ವರಲಕ್ಷಿ' ಸಿನೆಮಾವನ್ನು ಜಯಣ್ಣ ಕಂಬೈನ್ಸ್ ವಿತರಿಸುತ್ತಿದ್ದು, ಡಿಸೆಂಬರ್ ೧೬ ಕ್ಕೆ ಬಿಡುಗಡೆಯಾಗಲಿದೆ. ನವೆಂಬರ್ ೨೫ ಕ್ಕೆ ಬಿಡುಗಡೆಯಾಗಬೇಕಿದ್ದರು, ನೋಟು ಹಿಂಪಡೆತ ನಿರ್ಧಾರದಿಂದ ನಗದು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದು ಮುಂದೂಡಲಾಗಿತ್ತು.
ಈ ಸಿನೆಮಾದಲ್ಲಿ ಮಾಳವಿಕಾ ಮೋಹನನ್ ಕೂಡ ಪಾದಾರ್ಪಣೆ ಮಾಡಿದ್ದು ಹಿರಿಯ ನಟರಾದ ಪ್ರಕಾಶ್ ರಾಜ್ ಹಾಗು ಮಧು ನಟಿಸಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತ ಮತ್ತು ಪ್ರೀತಾ ಜಯರಾಮ್ ಅವರ ಸಿನೆಮ್ಯಾಟೋಗ್ರಫಿ ಸಿನೆಮಾಗಿದೆ.