ಬೆಂಗಳೂರು: ಕಿರುತೆರೆಯಿಂದ ಬೆಳ್ಳಿತೆರೆಗೆ ಹಾಗೆಯೇ ಬೆಳ್ಳಿತೆರೆಯಿಂದ ಕಿರುತೆರೆಗೆ ವಲಸೆ ಬಂದು ನಟಿಸುವುದು ಸಾಮಾನ್ಯ ಪ್ರಕ್ರಿಯೆ.
ಈಗ ಬೆಳ್ಳಿತೆರೆಯಿಂದ ಕಿರುತೆರೆಗೆ ಎಂಟ್ರಿ ಕೊಟ್ಟಿರುವ ಇತ್ತೀಚಿನ ತಾರೆ ಯಜ್ಞಾ ಶೆಟ್ಟಿ. ಸಿನೆಮಾಗಳಲ್ಲಿ ಖ್ಯಾತಿ ಗಳಿಸಿರುವ ನಟಿ ಈಗ ಧಾರಾವಾಹಿಯಲ್ಲಿ ನಟಿಸಲು ಮುಂದಾಗಿದ್ದಾರೆ. ನಟ-ನಿರ್ದೇಶಕ ಸುದೀಪ್ ನಿರ್ಮಾಣದ ಮೆಗಾ ಧಾರಾವಾಹಿ 'ವಾರಸದಾರ'ದಲ್ಲಿ ಯಜ್ಞಾ ನಾಯಕನಟಿ.
ಈ ಧಾರಾವಾಹಿಯನ್ನು ಗಡ್ಡ ವಿಜಿ ನಿರ್ದೇಶಿಸಲಿದ್ದು, ಡ್ರಾಮಾ ಜೂನಿಯರ್ಸ್ ಗೆದ್ದ ಬಾಲ ನಟಿ ಚಿತ್ರಾಲಿ ಕೂಡ ನಟಿಸುತ್ತಿರುವುದು ವಿಶೇಷ. ಈ ಧಾರಾವಾಹಿಯ ಬಗ್ಗೆ ಹೆಚ್ಚು ವಿವರಗಳನ್ನು ತಂಡ ಬಹಿರಂಗಪಡಿಸಿಲ್ಲವಾದರೂ, ಸದ್ಯಕ್ಕೆ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ೨೦೦೭ ರ 'ಒಂದು ಪ್ರೀತಿಯ ಕಥೆ' ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಯಜ್ಞಾ ಶೆಟ್ಟಿ, 'ಎದ್ದೇಳು ಮಂಜುನಾಥ', 'ಸುಗ್ರೀವ', 'ಲವ್ ಗುರು', 'ಕಳ್ಳ ಮಳ್ಳ ಸುಳ್ಳ' ಮತ್ತು 'ಉಳಿದವರು ಕಂಡಂತೆ' ಸಿನೆಮಾಗಳಲ್ಲಿ ನಟಿಸಿದ್ದರು.
'ದ್ಯಾವ್ರೆ' ಮತ್ತು 'ಪ್ಲಸ್' ಸಿನೆಮಾಗಳನ್ನು ನಿರ್ದೇಶಿಸಿದ್ದ ಗಡ್ಡ ವಿಜಿ ಈಗ ಧಾರಾವಾಹಿ ನಿರ್ದೇಶನಕ್ಕೆ ಇಳಿದಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಮೂಡಿಬರಲಿದೆ.