ಸಿನಿಮಾ ಸುದ್ದಿ

ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ಆಯ್ಕೆ ಮಾಡದ ದಸರಾ ಚಲನಚಿತ್ರೋತ್ಸವ; ನಿರ್ದೇಶಕ ಅಳಲು

Guruprasad Narayana
ಬೆಂಗಳೂರು: ಮೈಸೂರು ದಸರಾ ಹಬ್ಬದ ವಿಶೇಷವಾಗಿ ಅಕ್ಟೋಬರ್ 1 ರಿಂದ ಅಕ್ಟೋಬರ್ 8 ರವರೆಗೆ ನಡೆಯುತ್ತಿರುವ ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಸಿನೆಮಾಗಳ ಆಯ್ಕೆ ಪ್ರಕ್ರಿಯೆಯನ್ನು ಭರವಸೆಯ ಯುವ ನಿರ್ದೇಶಕ ಮಂಸೋರೆ ಪ್ರಶ್ನಿಸಿದ್ದಾರೆ. 
2014 ರ ಹಿಂದಿನ ಸಿನೆಮಾಗಳನ್ನು ಕೂಡ ಈ ಚಲನಚಿತ್ರೋತ್ಸವಕ್ಕೆ ಆಯ್ಕೆ ಮಾಡಿದ್ದರು, ಅತ್ಯುತ್ತಮ ಪ್ರಾದೇಶಿಕ ಚಿತ್ರ - 62 ನೇ ರಾಷ್ಟ್ರ ಪ್ರಶಸ್ತಿ ವಿಜೇತ ಸಿನೆಮಾ 'ಹರಿವು' ಆಯ್ಕೆಯಾಗದಿರುವುದರ ಬಗ್ಗೆ ನಿರ್ದೇಶಕ ಮಂಸೋರೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. 
ತಮ್ಮ ಫೇಸ್ಬುಕ್ ಖಾತೆಯಲ್ಲಿ ಅಳಲು ತೋಡಿಕೊಂಡಿರುವ ನಿರ್ದೇಶಕ ಮಂಸೋರೆ  "ರಾಷ್ಟ್ರ ಪ್ರಶಸ್ತಿ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಅತ್ತ್ಯುತ್ತಮ ಪ್ರಶಸ್ತಿ , ಅದಕ್ಕಿಂತ ಹೆಚ್ಚಾಗಿ ಜನರಿಂದ ಉತ್ತಮ ಪ್ರಶಂಸೆ ಪಡೆದಿದ್ದರೂ ಈ ಬಾರಿಯ ದಸರಾ ಚಲನಚಿತ್ರೋತ್ಸವದಲ್ಲಿ ನಮ್ಮ ‘ಹರಿವು’ ಸಿನೆಮಾ ಯಾಕೆ ಆಯ್ಕೆ ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸುವವರು ಯಾರು? ೨೦೧೪ ಕ್ಕು ಹಿಂದಿನ ಸಿನೆಮಾಗಳು ಹಾಗೂ ಅದರ ನಂತರದ ಕನ್ನಡ ಸಿನೆಮಾಗಳು ಆಯ್ಕೆ ಆಗಿರುವಾಗ, ನಮ್ಮ ಸಿನೆಮಾ ಮಾತ್ರ ಯಾಕೆ ಆಯ್ಕೆ ಮಾಡುವವರ ಕಣ್ಣಿಗೆ ಬಿದ್ದಿಲ್ಲ.. ಉತ್ತರ ನಿಗೂಡ.. 
"ಥಿಯೇಟರ್ನಲ್ಲಂತೂ ನಮ್ಮ ಸಿನೆಮಾ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ.. ಕನಿಷ್ಠ ಇಂತಹ ಉತ್ಸವಗಳ ಮೂಲಕವಾದರೂ ಜನರನ್ನು ತಲುಪೋಣವೆಂದರೆ.. ಇಲ್ಲೂ ಈ ರೀತಿಯಲ್ಲಿ ಕಡೆಗಣಿಸಲ್ಪಟ್ಟರೆ.. (ಅದೂ ಸರ್ಕಾರದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ) ಯಾವ ಭರವಸೆಯ ಮೇಲೆ ಚಿತ್ರರಂಗದಲ್ಲಿ ಮುಂದುವರೆಯುವುದು?" ಎಂದು ಬರೆದಿದ್ದಾರೆ. 
ವಿಮರ್ಶಕರ ಮತ್ತು ಜನರ ಅಪಾರ ಮೆಚ್ಚುಗೆ ಗಳಿಸಿದ್ದ ಈ ಸಿನೆಮಾ ಆಯ್ಕೆ ಸಮಿತಿಯ ಕಣ್ಣು ತಪ್ಪಿದ್ದು ಹೇಗೆ? 
SCROLL FOR NEXT