ಭಾರತದ ನೈಟಿಂಗೇಲ್ ಲತಾ ಮಂಗೇಶ್ಕರ್
ಕೋಲ್ಕತ್ತಾ: ಭಾರತದ ನೈಟಿಂಗೇಲ್ ಲತಾ ಮಂಗೇಶ್ಕರ್ ಅವರಿಗೆ ಅಕ್ಟೋಬರ್ 20 ರಂದು ನೀಡಬೇಕಿದ್ದ 'ವಂಗವಿಭೂಷಣ' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಂದೂಡಲಾಗಿದೆ. ಅವರು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರಿಗಮ ಭಾರತ ಮುಖ್ಯಸ್ಥ ಸಂಜೀವ್ ಗೋಯೆಂಕಾ ಹೇಳಿದ್ದಾರೆ.
"ಲತಾ ಮಂಗೇಶ್ಕರ್ ಅವರ ಆರೋಗ್ಯ ಸರಿಯಿಲ್ಲ. ಆದುದರಿಂದ ಅವರ ಮುಂಬೈ ಮನೆಯಲ್ಲಿ ಅಕ್ಟೋಬರ್ 20 ರಂದು ನಡೆಯಬೇಕಿದ್ದ 'ವಂಗವಿಭೂಷಣ' ಪ್ರದಾನ ಕಾರ್ಯಕ್ರಮ ಮುಂದೂಡಲಾಗಿದೆ" ಎಂದು ಗೋಯೆಂಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮ ನವೆಂಬರ್ ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. "ಗಾನ ಕೋಗಿಲೆಯ ಆರೋಗ್ಯ ಏರುಪೇರಾಗಿದೆ ಎಂದು ತಿಳಿದು ನಮಗೆಲ್ಲಾ ದುಃಖವಾಗಿದೆ, ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತೇವೆ" ಎಂದು ಗೋಯೆಂಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಲತಾ ಮಂಗೇಶ್ಕರ್ ಅವರು ಬೆಂಗಾಲಿ ಹಾಡುಗಳಿಗೆ ನೀಡಿರುವ ಕೊಡುಗೆಯನ್ನು ಗುರುತಿಸಿ 'ವಂಗವಿಭೂಷಣ' ಪ್ರಶಸ್ತಿ ನೀಡಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ.
2011 ರಲ್ಲಿ ಸ್ಥಾಪಿತವಾಗಿದ್ದ ಈ ಪ್ರಶಸ್ತಿಯನ್ನು ಇಲ್ಲಿಯವರೆಗೆ ಬ್ಯಾಲೆ ನೃತ್ಯಗಾರ್ತಿ ಅಮಲಾ ಶಂಕರ್, ಸರೋದ್ ಮಾಸ್ಟರ್ ಅಮ್ಜದ್ ಅಲಿ ಖಾನ್, ಖ್ಯಾತ ಗಾಯಕ ಮನ್ನಾ ಡೇ, ಲೇಖಕಿ ಮಹಾಶ್ವೇತಾ ದೇವಿ, ಫುಟ್ ಬಾಲ್ ಆಟಗಾರ ಸೈಲೆನ್ ಮನ್ನಾ, ಹಾಕಿ ಒಲಂಪಿಕ್ ಆಟಗಾರ ಲೆಸ್ಲಿ ಕ್ಲಾಡಿಯಸ್, ಕಲಾವಿದ ಜೋಗೆನ್ ಚೌಧರಿ, ಬರಹಗಾರ ಶೀರ್ಷೆನ್ದು ಮುಖ್ಯೋಪಾಧ್ಯಾಯ, ನಿರ್ದೇಶಕ ಗೌತಮ್ ಘೋಷ್, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕಾರ ಅಜಯ್ ಚಕ್ರವರ್ತಿ ಮತ್ತು ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರಿಗೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics