'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನೆಮಾದ ಸ್ಟಿಲ್
ಬೆಂಗಳೂರು: ನಗರದವರೇ ಆದ ಆದರೆ ತೆಲುಗು ಚಿತ್ರರಂಗದಲ್ಲಿ ಪ್ರಖ್ಯಾತರಾಗಿದ್ದ ಆಂಡ್ರ್ಯು ಅವರನ್ನು 'ಸಂತು ಸ್ಟ್ರೈಟ್ ಫಾರ್ವರ್ಡ್' ಕೈಬೀಸಿ ಕರೆದಿದೆ. ಮೊದಲಿಗೆ ಫ್ಯಾಷನ್ ಫೋಟೋಗ್ರಾಫರ್ ಆಗಿ ನಂತರ ವನ್ಯಜೀವಿ ಛಾಯಾಗ್ರಾಹಕರಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದವರು ಈಗ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ.
ಕನ್ನಡ ಚಿತ್ರರಂಗ ಪ್ರವೇಶದ ಬಗ್ಗೆ ಮಾತನಾಡುವ ಅವರು "'ಸಂತು ಸ್ಟ್ರೈಟ್ ಫಾರ್ವರ್ಡ್'ಗೆ ನನ್ನನ್ನು ಕರೆತಂದವರು ಯಶ್. ನಾನು ಆಗ ಪವನ್ ಕಲ್ಯಾಣ್ ಅವರ 'ಸರ್ದಾರ್ ಗಬ್ಬರ್ ಸಿಂಗ್' ಕೆಲಸದಲ್ಲಿ ನಿರತನಾಗಿದ್ದೆ" ಎನ್ನುತ್ತಾರೆ.
ಸ್ಟಿಲ್ ಛಾಯಾಗ್ರಾಹಕನಿಂದ ಸಿನೆಮ್ಯಾಟೋಗ್ರಾಫಿಗೆ ಬದಲಾದದ್ದನ್ನು ವಿವರಿಸುವ ಆಂಡ್ರ್ಯು, 15 ವರ್ಷಗಳ ಕಾಲ ಸ್ಟಿಲ್ ಫೋಟೋಗ್ರಫಿ ಮಾಡಿ ನಂತರ ಖ್ಯಾತ ಸಿನೆಮ್ಯಾಟೋಗ್ರಾಫರ್ ಪಿ ಸಿ ಶ್ರೀರಾಮ್ ಅವರಿಗೆ ಸಹಾಯಕನಾಗಿ 5 ವರ್ಷ ಕೆಲಸ ಮಾಡಿ ಸ್ವತಂತ್ರ ಸಿನೆಮ್ಯಾಟೋಗ್ರಾಫರ್ ಆಗಿ ಹೊರಹೊಮ್ಮಿದ್ದನ್ನು ನೆನಪಿಸಿಕೊಳ್ಳುತ್ತಾರೆ.
"ನನಗೆ ತಮಿಳು ಮತ್ತು ತೆಲುಗಿನಲ್ಲಿ ಅಪಾರ ಅವಕಾಶಗಳು ಸಿಕ್ಕವು. 'ಡಾರ್ಲಿಂಗ್', 'ಉಲ್ಲಾಸಂಗ ಉತ್ಸಾಹಂಗ' ಮುಂತಾದವು. ಪವನ್ ಕಲ್ಯಾಣ್, ಜೂನಿಯರ್ ಎನ್ ಟಿ ಆರ್, ನಿತಿನ್ ಮುಂತಾದವರೊಂದಿಗೆ ಕೆಲಸ ಮಾಡಿದ್ದು ನನನ್ ಅದೃಷ್ಟ" ಎನ್ನುತ್ತಾರೆ.
ತಮ್ಮ ಬೆಂಗಳೂರು ದಿನಗಳನ್ನು ನೆನಪಿಸಿಕೊಳ್ಳುವ ಆಂಡ್ರ್ಯು, ಸುದೀಪ್ ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಅವರ ಫೋಟೋ ಶೂಟ್ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. "ನಾನು ಸಿನೆಮಾದ ಬಹು ದೊಡ್ಡ ಅಭಿಮಾನು. ನಗರದಲ್ಲಿ ನಾನು ಹಲವು ಸಿನೆಮಾಗಳನ್ನು ನೋಡುತ್ತಿದ್ದೆ. ನಾನು ಇಷ್ಟು ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದರು ನಾನು ಬೆಂಗಳೂರಿಗ ಎಂದು ಎಷ್ಟೋ ಜನಕ್ಕೆ ಗೊತ್ತಿಲ್ಲ. ನಾನು ಕರ್ನಾಟಕದವನೆಂದು ತಿಳಿದು ಯಶ್ ಅವರಿಗೂ ಆಶ್ಚರ್ಯವಾಯಿತು, ನನ್ನ ಪೋಷಕರು ಇನ್ನೂ ನಗರದಲ್ಲೇ ವಾಸಿಯುತ್ತಾರೆ. ನಾನು ಮತ್ತು ನನ್ನ ಪತ್ನಿ ನನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ಹೈದರಾಬಾದ್ ನಲ್ಲಿ ನೆಲೆಸಿದ್ದೇನೆ" ಎನ್ನುತ್ತಾರೆ.
ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ದೀಪಾವಳಿ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.