ಬ್ಯೂಟಿಫುಲ್ ಮನಸುಗಳು' ಸಿನೆಮಾದಲ್ಲಿ ನೀನಾಸಂ ಸತೀಶ್ ಮತ್ತು ಶ್ರುತಿ ಹರಿಹರನ್
ಬೆಂಗಳೂರು: 'ಸಿಂಪಲ್ ಆಗ್ ಒಂದು ಲವ್ ಸ್ಟೋರಿ' ಮೂಲಕ ಬೆಳಕಿಗೆ ಬಂದವರು ಸಂಗೀತ ನಿರ್ದೇಶಕ ಬಿ ಜೆ ಭರತ್. ನಂತರ 'ಬಹುಪರಾಕ್', 'ಹಾಫ್ ಮೆಂಟ್ಲು', 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಸಿನೆಮಾಗಳ ಸಂಗೀತದ ಮೂಲಕ ತಮ್ಮದೇ ಛಾಪು ಮೂಡಿಸಿದವರು. ಈಗ ನಿರ್ದೇಶಕ ಜಯತೀರ್ಥ ಅವರ ಮುಂದಿನ ಚಿತ್ರ 'ಬ್ಯೂಟಿಫುಲ್ ಮನಸುಗಳು' ಸಿನೆಮಾಗೆ ಕೂಡ ಸಂಗೀತ ನೀಡಿದ್ದಾರೆ.
ಈ ಸಿನೆಮಾ ಸಂಗೀತ ಆಲ್ಬಮ್ ಅನ್ನು ನಟ ದರ್ಶನ ಅನಾವರಣ ಮಾಡಲಿದ್ದಾರಂತೆ. ಈ ಸಿನೆಮಾದಲ್ಲಿ ಒಂದೇ ಹಾಡಿದ್ದರು, ಎರಡು ವಿಭಿನ್ನ ಶೈಲಿಯಲ್ಲಿ ಮೂಡಿದೆ ಎನ್ನತ್ತಾರೆ ಭರತ್. "ಹಾಗೆಯೇ ಹಿನ್ನಲೆಯಲ್ಲಿ ಓಡುತ್ತಿರುವ ಥೀಮ್ ಹಾಡಿದೆ. ಸಿನೆಮಾದಲ್ಲಿ ಬೀದಿ ಬದಿಯ ವ್ಯಾಪಾರಿ ಪಾತ್ರ ಮಾಡಿರುವ ತಬಲಾ ನಾಣಿಯವರಿಗಾಗಿಯೇ ಮಾಡಿರುವ ಮತ್ತೊಂದು ಹಾಡಿದೆ" ಎನ್ನುತ್ತಾರೆ ಭರತ್.
ಈ ಸಿನೆಮಾದಲ್ಲಿ ಕೇವಲ ಒಂದೇ ಹಾಡಿದ್ದರು ಇದು ಮ್ಯೂಸಿಕಲ್ ಸಿನೆಮಾ ಎನ್ನುತ್ತಾರೆ ಭರತ್. "ಜಯತೀರ್ಥ ಬಹಳ ಪ್ರಬುದ್ಧ ನಿರ್ದೇಶಕ. ಸುಮ್ಮನೆ ಇರಬೇಕೆಂದು ಹಾಡುಗಳನ್ನು ಅವರು ತುರುಕುವುದಿಲ್ಲ. ಸ್ಕ್ರಿಪ್ಟ್ ಗೆ ಅಗತ್ಯವಿದ್ದದ್ದು ಕೇವಲ ಒಂದು ಹಾಡು ಮತ್ತು ನನಗು ಅದು ಸರಿಯೆನ್ನಿಸಿತು" ಎನ್ನುತ್ತಾರೆ ಭರತ್.
ಸ್ಕಂದ ಎಂಟರ್ಟೈನರ್ಸ್ ಫೀಚರ್ಸ್ ನಿರ್ಮಿಸಿರುವ 'ಬ್ಯೂಟಿಫುಲ್ ಮನಸುಗಳು' ಸಿನೆಮಾದಲ್ಲಿ ನೀನಾಸಂ ಸತೀಶ್ ಮತ್ತು ಶ್ರುತಿ ಹರಿಹರನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.