ಬೆಂಗಳೂರು: ತಮ್ಮ ನಿರ್ದೇಶನದ 'ನೀರ್ ದೋಸೆ' 50 ದಿನ ಪೂರೈಸಿರುವುದಕ್ಕೆ ನಿರ್ದೇಶಕ ವಿಜಯ್ ಪ್ರಸಾದ್ ಅತೀವ ಸಂತಸದಿಂದಿದ್ದಾರೆ. "ಎಲ್ಲ ಹೋರಾಟಗಳ ನಡುವೆ ಈ ಸಿನೆಮಾ ಹೊರತರುವ ದಿಟ್ಟ ನಿರ್ಧಾರ ಈಗ ಫಲ ನೀಡಿದೆ. ನನಗೆ ಹೆಮ್ಮೆ ಎನ್ನಿಸುತ್ತಿದೆ" ಎನ್ನುತ್ತಾರೆ ನಿರ್ದೇಶಕ.
"ನಾನು ಯೋಗರಾಜ್ ಭಟ್ ಮತ್ತು ತಂಡದ ಒಡೆತನದ 'ಯೋಗರಾಜ್ ಮೂವೀಸ್' ಬ್ಯಾನರ್ ಅಡಿ ಸಿನೆಮಾ ನಿರ್ದೇಶಿಸಲಿದ್ದೇನೆ. ನಾನು ಯೋಗರಾಜ್ ಭಟ್ ಅವರನ್ನು ಬಹಳ ದಿನಗಳಿಂದ ಬಲ್ಲೆ ಮತ್ತು ಇಬ್ಬರು ಜೊತೆಗೂಡುವುದನ್ನು ಬಹಳ ದಿನಗಳಿಂದ ಚರ್ಚಿಸುತ್ತಿದ್ದೆವು. ಈಗ ಅವರ ಬ್ಯಾನರ್ ನಲ್ಲಿ ಸಿನೆಮಾ ಮಾಡುವ ಅವಕಾಶ ಒದಗಿದೆ" ಎನ್ನುತ್ತಾರೆ.
ತಲೆಯಲ್ಲಿ ಮೂರ್ನಾಲ್ಕು ಸಿನೆಮಾ ಸಾಲುಗಳು ಓಡುತ್ತಿರುವುದಾಗಿ ಹೇಳುವ ವಿಜಯ್, ಅದರಲ್ಲಿ ಉತ್ತಮವಾದದ್ದನ್ನು ಆಯ್ಕೆ ಮಾಡಿ ಮುಂದಿನ ವಾರದಿಂದ ಸ್ಕ್ರಿಪ್ಟ್ ಮುಂದುವರೆಸುವುದಾಗಿ ತಿಳಿಸುತ್ತಾರೆ. "ಸಂಪೂರ್ಣ ಸ್ಕ್ರಿಪ್ಟ್ ಸಿದ್ಧಪಡಿಸಲು ಕನಿಷ್ಠ ಮೂರು ತಿಂಗಳು ಹಿಡಿಯುತ್ತದೆ. ಇದು ಅದ್ಭುತ ಸಿನೆಮಾವಾಗಿ ಮೂಡಿಬರಲಿದೆ ಎಂದು ನಂಬಿದ್ದೇನೆ" ಎನ್ನುವ ನಿರ್ದೇಶಕ "ಈ ಸಿನೆಮಾದಲ್ಲಿ ವಿಭಿನ್ನ ಪ್ರಕಾರವನ್ನು ಪ್ರಯೋಗಿಸುತ್ತಿದ್ದು, 'ಸಿದ್ಲಿಂಗು' ಅಥವಾ 'ನೀರ್ ದೋಸೆ'ಗಿಂತಲೂ ಬಹಳ ವಿಭಿನ್ನವಾಗಿರುತ್ತದೆ" ಎನ್ನುತ್ತಾರೆ.
ಮುಂದಿನ ಫೆಬ್ರವರಿಯಲ್ಲಿ ಸಿನೆಮಾ ಚಿತ್ರೀಕರಣ ಪ್ರಾರಂಭಿಸುವ ಇರಾದೆಯಿರುವ ನಿರ್ದೇಶಕ , 'ನೀರ್ ದೋಸೆ' ಸಿನೆಮಾದ ನಿರ್ಮಾಪಕರಾದ ಸ್ಕಂದ ಎಂಟರ್ಟೈನರ್ಸ್ ಜೊತೆಗೂ ಮತ್ತೊಂದು ಸಿನೆಮಾ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.