ನಾಗ್ಪುರ: ಶೋ ನಡೆಸಿಕೊಡುತ್ತಿದ್ದ ವೇಳೆ ಸಂಭವಿಸಿದ ಹೃದಯಾಘಾತದಿಂದ ರೇಡಿಯೋ ಮಿರ್ಚಿ ಆರ್ ಜೆ ಸ್ಟುಡಿಯೋದಲ್ಲೇ ಮೃತಪಟ್ಟಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.
ರೇಡಿಯೋ ಮಿರ್ಚಿಯ 'ಹಾಯ್ ನಾಗ್ಪುರ' ಶೋ ನಡೆಸುತ್ತಿದ್ದ ಆರ್'ಜೆ ಶುಭಂ ಕೆಚ್ಚೆ ಆಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ.
24 ವರ್ಷದ ಶುಭಂ ಬೆಳಗ್ಗೆ 9.30ರ ವೇಳೆಗೆ ಕಚೇರಿಗೆ ಬಂದಾಗಲೇ ಎದೆನೋವು ಕಾಣಿಸಿಕೊಂಡಿತ್ತು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಶುಭಂ ಎಂದಿನಂತೆ ಶೋ ನಡೆಸಲು ತೆರಳಿದ್ದಾರೆ. ಬಳಿಕ ಕಾರ್ಯಕ್ರಮದ ನಡುವಿನ ವಿರಾಮದ ಸಮಯದಲ್ಲಿ ಹೊರಬಂಧ ಶುಭಂ ಬಾತ್'ರೂಂಗೆ ತೆರಳಿದ್ದರು. ಆದರೆ ಅಲ್ಲಿ ಮತ್ತೆ ಎದೆ ನೋವಿನಿಂದ ಕುಸಿದು ಬಿದ್ದಿದ್ದಾರೆ. ಕಚೇರಿಯ ಭದ್ರತಾ ಸಿಬ್ಬಂದಿ ಶುಭಂ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲೇ ಶುಭಂ ಸಾವನ್ನಪ್ಪಿದ್ದರು.
ಹೃದಯಾಘಾತದಿಂದ ಶುಭಂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಶುಭಂ ಅವರ ತಂದೆ ಹಲವು ವರ್ಷಗಳ ಹಿಂದೆಯೇ ನಿಧನರಾಗಿದ್ದು, ತಾಯಿ ಹಾಗೂ ಒಬ್ಬ ತಂಗಿ ಶುಭಂ ಅವರ ಸಂಪಾದನೆಯನ್ನು ಅವಲಂಬಿಸಿದ್ದರು ಎಂದು ಹೇಳಲಾಗಿದೆ.