'ಮುಕುಂದ ಮುರಾರಿ' ಸಿನೆಮಾದಲ್ಲಿ ಸುದೀಪ್
ಬೆಂಗಳೂರು: 'ಮುಕುಂದ ಮುರಾರಿ' ಚಿತ್ರತಂಡ, ನಟ ಸುದೀಪ್ ಗಾಗಿ ವಿಶೇಷ ಹಾಡೊಂದನ್ನು ಯೋಜಿಸುತ್ತಿತ್ತು. ಈಗ ಮೂಲಗಳ ಪ್ರಕಾರ ಆ ಹಾಡಿನಲ್ಲಿ ನಟಿ ರಚಿತಾ ರಾಮ್ ಮತ್ತು ಭಾವನಾ ಕಾಣಿಸಿಕೊಳ್ಳಲಿದ್ದಾರೆ.
ನಂದ ಕಿಶೋರ್ ನಿರ್ದೇಶನದ ಈ ಸಿನೆಮಾದಲ್ಲಿ ಉಪೇಂದ್ರ ಮತ್ತು ನಿಖಿತಾ ತುಕ್ರಾಲ್ ಕೂಡ ಮುಖ್ಯಭೂಮಿಕೆಯಲ್ಲಿದ್ದಾರೆ. ರವಿಶಂಕರ್ ಮತ್ತು ಅವಿನಾಶ್ ತಾರಾಗಣದ ಭಾಗವಾಗಿದ್ದು "ಕೃಷ್ಣನಾಗಿ ಕಾಣಿಸಿಕೊಳ್ಳುತ್ತಿರುವ ಸುದೀಪ್ ಜೊತೆಗೆ ನೃತ್ಯ ಮಾಡಲು ಇಬ್ಬರು ಜನಪ್ರಿಯ ನಾಯಕನಟಿಯನ್ನು ಹುಡುಕಲಾಗುತ್ತಿತ್ತು. ರಚಿತಾ, ಭಾವನಾ, ರೆಜಿನಾ ಕ್ರಸಾಂಡ ಮತ್ತು ಲಕ್ಷ್ಮಿ ರೈ ಅವರನ್ನು ಪರಿಗಣಿಸಲಾಗಿತ್ತು. ಈಗ ಅವರುಗಳಲ್ಲಿ ಮೊದಲ ಇಬ್ಬರು ಸೂಕ್ತ ಎಂದು ತಿಳಿಯಲಾಗಿದ್ದು, ಸದ್ಯಕ್ಕೆ ಕಾಶ್ಮೀರದಲ್ಲಿ ಹೆಬ್ಬುಲಿ ಚಿತ್ರೀಕರಣದಲ್ಲಿ ನಿರತರಾಗಿರುವ ಸುದೀಪ್ ಹಿಂದಿರುಗಿದ ಮೇಲೆ ಈ ಹಾಡು ಚಿತ್ರೀಕರಣಗೊಳ್ಳಲಿದೆ" ಎಂದು ಮೂಲಗಳು ತಿಳಿಸಿವೆ.
ಸುದೀಪ್ ಅವರ ಹುಟ್ಟುಹಬ್ಬದ ದಿನ ಮೊದಲ ನೋಟ ಬಿಡುಗಡೆಯಾಗಿದ್ದು, ಉಪೇಂದ್ರ ಅವರ ಹುಟ್ಟುಹಬ್ಬದ ದಿನವಾದ ಸೆಪ್ಟೆಂಬರ್ 18 ರಂದು ಆಡಿಯೋ ಬಿಡುಗಡೆಯಾಗಲಿದೆ.
ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಸಿನೆಮಾಗೆ ಸುಧಾಕರ್ ರಾಜ್ ಅವರ ಸಿನೆಮ್ಯಾಟೋಗ್ರಫಿ ಇದೆ. ಬಾಲಿವುಡ್ ನ ಜನಪ್ರಿಯ ಸಿನೆಮಾ 'ಓ ಮೈ ಗಾಡ್' ನ ರಿಮೇಕ್ 'ಮುಕುಂದ ಮುರಾರಿ'.