ಮುಂಬೈ: ಹಲವಾರು ನಿರ್ದೇಶಕರಿಗೆ ನೃತ್ಯ ನಿರ್ದೇಶನ ಮಾಡಿರುವ ಫರಾಹ್ ಖಾನ್, ಅವರಲ್ಲೆಲ್ಲಾ ಹೆಚ್ಚು ಸೃಜನಶೀಲರು ಮಣಿರತ್ನಂ ಎಂದಿದ್ದಾರೆ.
"ನಾನು ಕೆಲಸ ಮಾಡಿರುವ ಅತಿ ಹೆಚ್ಚು ಸೃಜನಶೀಲ ನಿರ್ದೇಶಕ ಮಣಿರತ್ನಂ. ನನ್ನ ಅತ್ಯುತ್ತಮ ಕೆಲಸ ಮೂಡಿಬಂದಿರುವುದು 'ದಿಲ್ ಸೆ' ಮತ್ತು 'ಅಲೆಪಾಯುತೆ' ಸಿನೆಮಾಗಳಲ್ಲಿ. ಅವರು ಹಾಡುಗಳನ್ನು ಅದು ಹೇಗೋ ವಿಶಿಷ್ಟವಾಗಿ ಮೂಡಿಸುತ್ತಾರೆ. ಅವುಗಳು ಸಿನೆಮಾಗಳ ಜೊತೆ ಕೂಡಿಕೊಳ್ಳದೆ ಹೋದರು ಅವುಗಳನ್ನು ಪ್ರತ್ಯೇಕವಾಗಿ ನೋಡಿದರೆ ನೀವು ಆ ಹಾಡುಗಳನ್ನು ಹೆಚ್ಚು ಇಷ್ಟಪಡುತ್ತೀರಿ" ಎಂದು ಫರಾಹ್ ಹೇಳಿದ್ದಾರೆ.
ನೃತ್ಯ ನಿರ್ದೇಶಕಿಯಾಗಿದ್ದ ನಂತರ ಫರಾಹ್ ಸ್ವತಂತ್ರವಾಗಿ 'ಮೈ ಹೂ ನಾ' ಮತ್ತು 'ಓಂ ಶಾಂತಿ ಓಂ' ನಂತಹ ಸಿನೆಮಾಗಳನ್ನು ಕೂಡ ನಿರ್ದೇಶಿಸಿದ್ದರು.
"ನಾನು ನೃತ್ಯನಿರ್ದೇಶಕಿಯಾಗಿದ್ದಾಗ ನಾನು ಯಾರಿಗೂ ಸಹ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿರಲಿಲ್ಲ. ನಾನು 'ಜೋ ಜೀತಾ ವೊಹಿ ಸಿಕಂದರ್' ಸಿನೆಮಾಗೆ ನಿರ್ದೇಶಕ ಮನ್ಸೂರ್ ಅಲಿ ಅವರಿಗೆ ಸಹಾಯಕಿಯಾಗಿದ್ದೆ. ನಾನು ನಾಲ್ಕನೇ ಸಹನಿರ್ದೇಶಕಿಯಾಗಿದ್ದೆ. ಆ ಸಮಯದಲ್ಲಿ ನೃತ್ಯ ನಿರ್ದೇಶನ ನನ್ನ ಆಯ್ಕೆಯಾಗಿರಲಿಲ್ಲ" ಎಂದು ಅವರು ಹೇಳಿದ್ದಾರೆ.
ಅಮೀರ್ ಖಾನ್ ನಟಿಸಿದ್ದ 'ಜೋ ಜಿತಾ ವೊಹಿ ಸಿಕಂದರ್' ಸಿನೆಮಾದ ಜನಪ್ರಿಯ ಹಾಡಾದ 'ಪೆಹಲಾ ನಶಾ' ಹಾಡಿಗೆ ಫರಾಹ್ ನೃತ್ಯ ನಿರ್ದೇಶನ ಮಾಡಿದ್ದರು.