'ದನ ಕಾಯೋನು' ಸಿನೆಮಾದ ಸ್ಟಿಲ್
ಬೆಂಗಳೂರು: ಸಮಯಕ್ಕೆ ಸರಿಯಾಗಿ ಚಿತ್ರೀಕರಣ ಮುಗಿಸಿದ್ದರೂ ಯೋಗರಾಜ್ ಭಟ್ ನಿರ್ದೇಶನದ 'ದನ ಕಾಯೋನು' ಸಿನೆಮಾದ ಬಿಡುಗಡೆ ಮಾತ್ರ ವಿಳಂಬವಾಗುತ್ತಲೇ ಬಂದಿತ್ತು. ಕಾರಣ: ಗಜಗಾತ್ರದ ಗ್ರಾಫಿಕ್ಸ್ ಕೆಲಸ ನಿರ್ದೇಶಕರ ಮೂರೂ ತಿಂಗಳ ಸಮಯ ತಿಂದು ಹಾಕಿತಂತೆ!
"ಅಂತಿಮ ಸುತ್ತಿನ ಕೆಲಸ ಕಳೆದ ವಾರ ಮುಗಿದಿದೆ" ಎಂದು ತಿಳಿಸುವ ಯೋಗರಾಜ್ ಸದ್ಯಕ್ಕೆ ಸೆನ್ಸಾರ್ ಮಂಡಳಿಯ ಮುಂದೆ ಸಿನೆಮಾ ಕೊಂಡೊಯ್ಯಲು ಸಿದ್ಧರಾಗುತ್ತಿದ್ದಾರೆ. "ಹಾಗೆಯೇ ಪ್ರಾಣಿ ದಯಾ ಸಂಘದಿಂದ ಪರವಾನಗಿಗೂ ಅರ್ಜಿ ಸಲ್ಲಿಸಿದ್ದು, ದಸರಾ ಹಬ್ಬದ ಸಮಯದಲ್ಲಿ ಅಕ್ಟೋಬರ್ ಮೊದಲ ವಾರಕ್ಕೆ ಸಿನೆಮಾ ಬಿಡುಗಡೆ ಮಾಡುವ ಸಾಧ್ಯತೆ ಇದೆ" ಎನ್ನುತ್ತಾರೆ.
ಕಂಪ್ಯೂಟರ್ ಗ್ರಾಫಿಕ್ಸ್ ಸಾಮಾನ್ಯ ಕೆಲಸವಲ್ಲ ಎನ್ನುವ ನಿರ್ದೇಶಕ "ಪ್ರಾಣಿಗಳು ನಮಗೆ ಬೇಕಾದಂತೆ ನಟಿಸುವ ನಿರೀಕ್ಷೆ ಇಟ್ಟುಕೊಳ್ಳುವುದು ಅಸಾಧ್ಯ, ಆವಾಗಲೇ ಗ್ರಾಫಿಕ್ಸ್ ಸಹಕರಿಸುವುದು. ಒಂದು ಅಥವಾ ಎರಡು ಟೇಕ್ ಗಳಲ್ಲಿ ಒಪ್ಪಿಗೆಯಾಗುವ ಕೆಲಸ ಅದಲ್ಲ. ಬಹಳ ಬದಲಾವಣೆಗಳು ಬೇಕಾಗುತ್ತವೆ. ಪ್ರಾಣಿಗಳು ಬಾಲ ಅಲ್ಲಾಡಿಸುವುದನ್ನು ಸರಿಯಾಗಿ ತೋರಿಸಲು ಎರಡರಿಂದ ಮೂರು ವಾರ ಹಿಡಿಯುತ್ತದೆ. ನಾವು ಪ್ರಾಣಿಗಳನ್ನು ಬಳಸಬಹುದು ಆದರೆ ಪ್ರಾಣಿ ದಯಾ ಸಂಘದವರ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕಾಗುತ್ತದೆ" ಎಂದು ವಿವರಿಸುತ್ತಾರೆ.
ವಿಳಂಬವಾಗಿದ್ದರೂ ಹರಿಕೃಷ್ಣ ಅವರ ಸಂಗೀತ ಸಿನೆಮಾ ಬಗ್ಗೆ ಕುತೂಹಲವನ್ನು ಜೀವಂತವಾಗಿರಿಸಿವೆ ಎನ್ನುವ ನಿರ್ದೇಶಕ ದುನಿಯಾ ವಿಜಯ್ ಮುಖ್ಯ ಪಾತ್ರದಲ್ಲಿದ್ದು, ಪ್ರೇಕ್ಷಕರಿಗೆ ಆಕ್ಷನ್ ರಸದೌತಣ ಸಿಗಲಿದೆ ಎನ್ನುತ್ತಾರೆ . "ಜನಕ್ಕೆ ಬೆರಗುಗೊಳಿಸುವ ಸ್ಟಂಟ್ ಗಳು ಸಿನೆಮಾದಲ್ಲಿವೆ. ಸ್ಕ್ರಿಪ್ಟ್ ಹಂತದಲ್ಲೇ ದೃಶ್ಯಗಳನ್ನು ನಾವು ಯೋಜಿಸಿದ್ದೆವು ಆದರೆ ವಿಜಯ್ ತಂಡ ಸೇರಿದ ಮೇಲೆ ಸ್ಟಂಟ್ ಗಳು ದುಪ್ಪಟ್ಟಾದವು" ಎನ್ನುತ್ತಾರೆ ಯೋಗರಾಜ್.
ಪ್ರಿಯಾಮಣಿ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ಸಿನೆಮಾದಲ್ಲಿ ರಂಗಾಯಣ ರಘು ಮತ್ತು ಸುಚೇಂದ್ರ ಪ್ರಸಾದ್ ತಾರಾಗಣದಲ್ಲಿದ್ದಾರೆ. ಸುಜ್ಞಾನ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ.