ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ
ಬೆಂಗಳೂರು: ಪ್ರೇಮ್ ನಿರ್ದೇಶನದ 'ದ ವಿಲನ್' ಸಿನೆಮಾಗೆ ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನು ಕರೆತರಲಿದ್ದಾರೆ ಎಂಬ ಗುಲ್ಲು ಗಾಂಧಿನಗರದಲ್ಲಿ ಹಬ್ಬಿತ್ತು. ಆದರೆ ಈಗ ನಿರ್ದೇಶಕ ಇದರ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರಂತೆ. ಕಾರಣ: ನಟ ನಿಖಿಲ್ ಕುಮಾರ್ ಅವರ 'ಜಾಗ್ವಾರ್'ನಲ್ಲಿ ವಿಶೇಷ ಹಾಡೊಂದರಲ್ಲಿ ತಮನ್ನಾ ಕಾಣಿಸಿಕೊಳ್ಳುತ್ತಿರುವುದು!
ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರನ್ನು ಈ ಸಿನೆಮಾದ ಮೂಲಕ ಒಟ್ಟಿಗೆ ಕರೆತಂದಿರುವ ಪ್ರೇಮ್, "ಅವರು ವಿಶೇಷ ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ನಿಶ್ಚಯಿಸಿದ್ದರೆ, ನನ್ನ ಸಿನೆಮಾದಲ್ಲಿ ಅವರನ್ನು ತೊಡಗಿಸಿಕೊಳ್ಳುವುದಕ್ಕೆ ಆಸಕ್ತಿಯಿಲ್ಲ. ಅವರಷ್ಟೇ ದೊಡ್ಡ ಖ್ಯಾತಿಯ ಇನ್ನಿಬ್ಬರು ನಟಿಯರು 'ದ ವಿಲನ್' ಸಿನೆಮಾದ ಭಾಗವಾಗುವುದಕ್ಕೆ ಸಿದ್ಧರಿದ್ದಾರೆ. ಈಗ ಅವರನ್ನು ಪರಿಗಣಿಸುತ್ತೇನೆ" ಎನ್ನುತ್ತಾರೆ.
'ದ ವಿಲನ್' ಸಿನೆಮಾದಲ್ಲಿ ನಾಯಕ ನಟಿಗೆ ಪ್ರಮುಖ ಪಾತ್ರ ಇರುವುದರಿಂದ ಆ ಪಾತ್ರದ ಆಯ್ಕೆಗೆ ವಿಶೇಷ ಆಸ್ಥೆ ವಹಿಸಿರುವುದು ಎನ್ನುತ್ತಾರೆ ಪ್ರೇಮ್. "ಆ ಹಾಡಿಗೆ ಹೆಜ್ಜೆ ಹಾಕುವುದರ ಬಗ್ಗೆ ಮತ್ತೆ ಪರಿಗಣಿಸಲು ಅವರಲ್ಲಿ ಕೇಳಿಕೊಂಡಿದ್ದೆ ಏಕೆಂದರೆ ಇದು ನನ್ನ ಯೋಜನೆಗೆ ಅಡ್ಡಿಪಡಿಸುತ್ತದೆ ಆದರೆ ಕೊನೆಗೆ ಅದು ಅವರ ಆಯ್ಕೆ" ಎಂದು ಪ್ರೇಮ್ ವಿವರಿಸುತ್ತಾರೆ.
ಸದ್ಯಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರೊಂದಿಗೆ ಹಾಡಿನ ರೆಕಾರ್ಡಿಂಗ್ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪ್ರೇಮ್ ನಿರ್ಮಾಪಕ ಸಿ ಆರ್ ಮನೋಹರ್ ಅವರೊಂದಿಗೆ ಲಂಡನ್ ಗೆ ಹಾರಲಿದ್ದಾರೆ. "ನಾನು ಚಿತ್ರೀಕರಣಕ್ಕೆ ಜಾಗಗಳನ್ನು ಅಂತಿಮಗೊಳಿಸಿ ಹಿಂದಿರುಗಿದ ಮೇಲೆ ನಾಯಕನಟಿಯನ್ನು ಅಂತಿಮಗೊಳಿಸಲಿದ್ದೇನೆ" ಎನ್ನುತ್ತಾರೆ.
ಈಮಧ್ಯೆ ರಘು ಹಾಸನ್ ಅವರ 'ಗಾಂಧಿಗಿರಿ'ಯಲ್ಲಿ ಪ್ರೇಮ್ ತಮ್ಮ ಭಾಗದ ನಟನೆ ಮುಗಿಸಿಕೊಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics