

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಅಪರೇಷನ್, ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಳಾದ ಜೆಡಿಎಸ್ ಮತ್ತು ಬಿಜೆಪಿ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.
ಈ ಮಧ್ಯೆ ಹನಿಟ್ರ್ಯಾಪ್ ವಿಡಿಯೋ ಭೀತಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ಧದ ಅಪಪ್ರಚಾರದ ವಿಡಿಯೋ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ 18ನೇ ಸಿಸಿಹೆಚ್ ಕೋರ್ಟ್, 42 ಮಾಧ್ಯಮಗಳ ವಿರುದ್ಧ ಮಧ್ಯಂತರ ನಿರ್ಬಂಧಕಾಜ್ಞೆ ನೀಡಿದೆ.
ಇನ್ನು ಈಗಾಗಲೇ ಕೆಲ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಅಪ್ಲೋಡ್ ಆಗಿದ್ದು, ಅದನ್ನು ತೆರವುಗೊಳಿಸುವಂತೆಯೂ ಕೋರ್ಟ್ ಸೂಚನೆ ನೀಡಿದೆ.
ಮತ್ತೊಂದೆಡೆ ಸ್ಟ್ರಿಂಗ್ ಆಪರೇಷನ್ ವಿಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲ. ಸ್ಟ್ರಿಂಗ್ ಆಪರೇಷನ್ ವಿಡಿಯೋ ಬಳಸಿಕೊಂಡು ಕೆಲವು ಕಿಡಿಗೇಡಿಗಳು, ನನ್ನ ವಿರುದ್ದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ನಾನು ಸಂಪೂರ್ಣ ನಿರಪರಾಧಿ ಎನ್ನುವುದು ನನ್ನ ಆತ್ಮಸಾಕ್ಷಿಗೆ ಗೊತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.