ರಚಿತಾ ರಾಮ್- ಸುದೀಪ್ - ಭಾವನಾ
ಬೆಂಗಳೂರು: ಕಳೆದ ವಾರ ಕೊನೆಯ ಹಾಡಿನ ಚಿತ್ರೀಕರಣದೊಂದಿಗೆ 'ಮುಕುಂದ ಮುರಾರಿ' ಸಿನೆಮಾದ ಚಿತ್ರೀಕರಣ ಅಂತ್ಯಗೊಂಡಿದೆ. ಈ ಹಾಡು ನೆಲಮಂಗಲದ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡಿದೆ.
'ಮುಕುಂದ ಮುರಾರಿ'ಯಲ್ಲಿ ಕೃಷ್ಣನ ವೇಷ ಹಾಕಿರುವ ಸುದೀಪ್ ಜೊತೆಗೆ ರಚಿತಾ ರಾಮ್ ರಾಧೆಯಾಗಿ ಮತ್ತು ಭಾವನಾ ರುಕ್ಮಿಣಿಯಾಗಿ ಹೆಜ್ಜೆ ಹಾಕಿರುವುದು ಈ ಹಾಡಿನ ವಿಶೇಷ.
ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯ ಇರುವ ಈ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದಾರೆ.
ಈಗ ಸದ್ಯಕ್ಕೆ ಸೆನ್ಸಾರ್ ಮಂಡಳಿ ಮುಂದೆ ಸಿನೆಮಾ ಇದ್ದು, ಬಿಡುಗಡೆಯ ತವಕದಲ್ಲಿದ್ದಾರೆ ನಿರ್ದೇಶಕ ನಂದ್ ಕಿಶೋರ್. "ನಾನು ನನ್ನ ಸರದಿಗಾಗಿ ಕಾಯುತ್ತಿದ್ದೇನೆ" ಎನ್ನುವ ನಿರ್ದೇಶಕ, ದಸರಾ ಹಬ್ಬದ ನಂತರ ಸಿನೆಮಾ ಬಿಡುಗಡೆ ಮಾಡುವ ಇರಾದೆ ಹೊಂದಿದ್ದಾರೆ.
"ಹಬ್ಬದ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಿನೆಮಾಗಳು ಬಿಡುಗಡೆಯಾಗುತ್ತಿರುವುದರಿಂದ, ನಂತರದ ದಿನಗಳಲ್ಲಿ ನಮಗೆ ಬೇಕಾದಷ್ಟು ಥಿಯೇಟರ್ ಗಳು ಸಿಕ್ಕಿದ ಮೇಲಷ್ಟೇ ಸಿನೆಮಾ ಬಿಡುಗಡೆ ಮಾಡಲಿದ್ದೇವೆ" ಎಂದು ತಿಳಿಸುತ್ತಾರೆ.
ಈ ಸಿನೆಮಾದಲ್ಲಿ ಉಪೇಂದ್ರ ಮತ್ತು ನಿಖಿತಾ ತುಕ್ರಲ್ ಮುಖ್ಯ ಭೂಮಿಕೆಯಲ್ಲಿದ್ದು, ಇದು ಬಾಲಿವುಡ್ ಸಿನೆಮಾ 'ಓ ಮೈ ಗಾಡ್'ನ ರಿಮೇಕ್.