ಸಿನಿಮಾ ಸುದ್ದಿ

ವೃತ್ತಿ ಗಾಯನಕ್ಕೆ ಎಸ್.ಜಾನಕಿ ವಿದಾಯ

Sumana Upadhyaya
ದಕ್ಷಿಣ ಭಾರತದ ಗಾನ ಕೋಗಿಲೆ ಎಸ್.ಜಾನಕಿ ತಮ್ಮ ಸುದೀರ್ಘ ವೃತ್ತಿ ಗಾಯನಕ್ಕೆ ವಿದಾಯ ಹೇಳಿದ್ದಾರೆ. 78 ವರ್ಷದ ಹಿರಿಯ ಸಂಗೀತ ಕಲಾವಿದೆ ತಾವಿನ್ನು ಹಾಡುವುದಿಲ್ಲ ಎಂದು ನಿವೃತ್ತಿ ಘೋಷಿಸಿದ್ದಾರೆ. ಆದರೆ ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು ಅವರ ಸಾವಿನ ಬಗ್ಗೆ. 
ಗಾಯನಕ್ಕೆ ನಿವೃತ್ತಿ ಘೋಷಿಸಿದ್ದನ್ನು ತಪ್ಪಾಗಿ ಅರ್ಥೈಸಿ ಅನೇಕ ನೆಟಿಜೆನ್ ಗಳು ಸಂತಾಪ ಸೂಚಕ ಸಂದೇಶಗಳನ್ನು ಹಾಕಿದ್ದಾರೆ. ಅದೀಗ ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿವೆ. 
ತಮ್ಮ 60 ವರ್ಷಗಳ ವೃತ್ತಿಜೀವನದಲ್ಲಿ ಮಲಯಾಳಂ, ತೆಲುಗು, ಕನ್ನಡ, ತಮಿಳು, ಹಿಂದಿ, ಒರಿಯಾ ಸೇರಿದಂತೆ 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿ ಜನಮಾನಸದಲ್ಲಿ ನೆಲೆಸಿರುವ ಜಾನಕಿಯವರು ಇದೀಗ ಮಲಯಾಳಂ ಗೀತೆಯೊಂದಿಗೆ ತಮ್ಮ ಗಾಯನ ವೃತ್ತಿಗೆ ನಿವೃತ್ತಿ ಹಾಡುವುದಾಗಿ ಘೋಷಿಸಿದ್ದಾರೆ.
ಜಾನಕಿಯವರು, ಮುಂದಿನ ಮಲಯಾಳಂ ಚಿತ್ರ 10 ಕಲ್ಪನಕಲ್ ನಲ್ಲಿ ಜೋಗುಳ ಹಾಡೊಂದನ್ನು ಹಾಡಿದ್ದಾರೆ. ಇದರಲ್ಲಿ ಅನೂಪ್ ಮೆನನ್ ಮತ್ತು ಮೀರಾ ಜಾಸ್ಮಿನ್ ನಟಿಸುತ್ತಿದ್ದಾರೆ.
''ಇದು ನನ್ನ ಕೊನೆಯ ಹಾಡು. ಇನ್ನು ಮುಂದೆ ಯಾವ ರೆಕಾರ್ಡಿಂಗ್ ಹಾಡುಗಳಿಗೂ ನಾನು ಹಾಡುವುದಿಲ್ಲ ಮತ್ತು ಯಾವುದೇ ಸಮಾರಂಭಗಳಲ್ಲಿಯೂ ಹಾಡುವುದಿಲ್ಲ'' ಎಂದು ಜಾನಕಿಯವರು ಹೇಳಿದ್ದಾರೆಂದು ಇಂಗ್ಲೀಷ್ ದೈನಿಕವೊಂದು ವರದಿ ಮಾಡಿದೆ.
80ರ ಹೊಸ್ತಿಲಿನಲ್ಲಿರುವ ಈ ಹಿರಿಯ ಕಲಾವಿದೆ ತಮ್ಮ ನಿವೃತ್ತ ಜೀವನದಲ್ಲಿ ವಿಶ್ರಾಂತಿ ಪಡೆಯಲು ನಿಶ್ಚಯಿಸಿದ್ದಾರೆ. ಅವರು 1957ರಲ್ಲಿ ತಮಿಳು ಚಿತ್ರ ವಿಧಿಯಿನ್ ವಿಲಾಯತ್ತು ಮೂಲಕ ಹಾಡಲು ಆರಂಭಿಸಿದ್ದರು. ಅವರಿಗೆ ನಾಲ್ಕು ರಾಷ್ಟ್ರ ಪ್ರಶಸ್ತಿ, ತಮಿಳು, ಮಲಯಾಳಂ, ತೆಲುಗು ಮತ್ತು ಒರಿಯಾ ಸೇರಿ 32 ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿವೆ. 
SCROLL FOR NEXT