'ದೊಡ್ಮನೆ ಹುಡುಗ' ಸಿನೆಮಾದ ಸ್ಟಿಲ್
ಬೆಂಗಳೂರು: ಒಳ್ಳೆಯ ನಟನೆ, ಪ್ರತಿಭೆಯ ಕೌಶಲ್ಯ, ಕೆಲಸದಲ್ಲಿ ಬದ್ಧತೆ ಹೀಗೆ ಅಪಾರ ಗುಣಗಳನ್ನು ಹೊತ್ತ ನಟಿ ರಾಧಿಕಾ ಪಂಡಿತ್ ಅವರಿಗೆ ಕನ್ನಡ ಚಿತ್ರೋದ್ಯಮ ಭದ್ರ ನೆಲೆ ನೀಡಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಆದರೆ ಈ ಜನಪ್ರಿಯತೆಯಲ್ಲಿ ಮೈಮರೆಯದೆ ನಟಿ ಪ್ರತಿ ಸಿನೆಮಾಗೂ ತಮ್ಮ ನಟನೆಯನ್ನು ಉತ್ತಮಪಡಿಸಿಕೊಳ್ಳುತ್ತಲೇ ಇದ್ದಾರೆ.
ಈಗ ರಾಧಿಕಾ, ಪುನೀತ್ ಅವರೊಂದಿಗೆ ನಟಿಸಿರುವ 'ದೊಡ್ಮನೆ ಹುಡುಗ' ದಸರಾ ಹಬ್ಬದ ಭರ್ಜರಿ ಬಿಡುಗಡೆಗೆ ಸಿದ್ಧವಾಗಿದೆ.
ಈ ವರ್ಷ 'ಜೂಮ್' ನಲ್ಲಿ ಗಣೇಶ್ ಜೊತೆಗೆ ನಟಿಸಿ ಯಶಸ್ಸು ಕಂಡ ನಟಿ ಈಗ ತಮ್ಮ ಭಾವಿ ಪತಿ 'ಯಶ್' ವರೊಂದಿಗೆ ನಟಿಸುತ್ತಿರುವ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನೆಮಾದ ಚಿತ್ರೀಕರಣಕ್ಕಾಗಿ ಯುರೋಪ್ ತೆರಳಿದ್ದಾರೆ.
'ದೊಡ್ಮನೆ ಹುಡುಗ' ಸಿನೆಮಾದ ಬಗ್ಗೆ ತಮ್ಮ ಅನುಭವ ಹಂಚಿಕೊಳ್ಳುವ ನಟಿ, ಈ ಸಿನೆಮಾದಲ್ಲಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದನ್ನು ಬಯಲು ಮಾಡುತ್ತಾರೆ. "ನನಗೆ ಒಪ್ಪಿಗೆಯಾಗುವ ಮತ್ತು ನಾನು ಸಿನೆಮಾಗೆ ಮಹತ್ತರವಾಗಿ ಏನನ್ನಾದರೂ ಸಲ್ಲಿಸಬಲ್ಲ ಚಿತ್ರಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುವುದು. ಸ್ಕ್ರಿಪ್ಟ್ ಗಳೇ ನನ್ನ ಹೀರೊ ಮತ್ತು ನನ್ನ ಪಾತ್ರಗಳನ್ನು ನಾನು ಪ್ರೀತಿಸುತ್ತೇನೆ. ಸ್ಕ್ರೀನ್ ಸಮಯದ ಮೇಲೆ ನಾನು ಸಿನೆಮಾ ಒಪ್ಪಿಕೊಳ್ಳುವುದಿಲ್ಲ ಬದಲಾಗಿ ಪಾತ್ರದ ಗುಣಮಟ್ಟದ ಮೇಲೆ. ನನ್ನನ್ನು ನಾನು ನಟಿ ಎಂದು ಕರೆದುಕೊಳ್ಳುವ ಆತ್ಮವಿಶ್ವಾಸ ಬರುವುದು ಕೇವಲ ಸಿನೆಮಾಗಳಲ್ಲಿ ನಟಿಸುವುದರಿಂದಲ್ಲ ಬದಲಾಗಿ ಒಳ್ಳೆಯ ಸಿನೆಮಾಗಳಲ್ಲಿ ನಟಿಸುವುದಕ್ಕೆ" ಎನ್ನುವ ನಟಿ "ದೊಡ್ಮನೆ ಅಂತಹ ಒಂದು ಸಿನೆಮಾ" ಎನ್ನುತ್ತಾರೆ.
ಈ ಸಿನೆಮಾದಲ್ಲಿ ತಮ್ಮನ್ನು ವಿಶೇಷವಾಗಿ ಪ್ರದರ್ಶಿಸಿಕೊಳ್ಳಲು ಅವಕಾಶ ಸಿಕ್ಕಿದೆ ಎನ್ನುವ ರಾಧಿಕಾ "ಇದು ಕಮರ್ಷಿಯಲ್ ಮನರಂಜನಾ ಚಿತ್ರ. ಆಕ್ಷನ್, ಅತ್ಯುತ್ತಮ ನೃತ್ಯ, ಒಳ್ಳೆಯ ಸಂಭಾಷಣೆಗಳಿವೆ. ನಾನು ಅವೆಲ್ಲದರ ಭಾಗವಾಗಿದ್ದೇನೆ" ಎನ್ನುತ್ತಾರೆ.
ಸೂರಿ ಮತ್ತು ಪುನೀತ್ ಅವರೊಂದಿಗೆ ಇದು ತಮ್ಮ ಎರಡನೇ ಯೋಜನೆ ಎನ್ನುವ ರಾಧಿಕಾ "ಅವರಿಬ್ಬರದು ಪವರ್ ಜೋಡಿ. ಸೂರಿ ನನ್ನ ನೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ಇನ್ನು ಅಪ್ಪು ಅದ್ಭುತ ನಟ ಮತ್ತು ಅವರೊಂದಿಗೆ ನಟಿಸುವುದೇ ಖುಷಿ. 'ಹುಡುಗರು' ನಂತರ 'ದೊಡ್ಮನೆ'ಯಲ್ಲಿಯೂ ಅದ್ಭುತ ದೃಶ್ಯಗಳಿವೆ" ಎನ್ನುವ ನಟಿ ಅಂಬರೀಷ್, ಭಾರತಿ, ವಿಷ್ಣುವರ್ಧನ್ ಮತ್ತು ಸುಮಲತಾ ಇಂತಹ ಹಿರಿಯ ನಟ-ನಟಿಯರಿಂದ ಕಲಿತಿದ್ದು ಸಾಕಷ್ಟು ಎನ್ನುತ್ತಾರೆ.
'ದೊಡ್ಮನೆ ಹುಡುಗ' ಪುನೀತ್ ಅವರ 25 ನೆಯ ಚಿತ್ರವಾದ ಸಂದರ್ಭದಲ್ಲಿ ನಟನಿಗೆ ರಾಧಿಕಾ ಅಭಿನಂದನೆ ತಿಳಿಸಿದ್ದು "ಯಾವುದೇ ನಟನಿಗೆ 25 ನೆಯ ಸಿನೆಮಾ ಮೈಲಿಗಲ್ಲು. ಅಪ್ಪು ಅವರಿಗೆ ದೊಡ್ಮನೆ ಹುಡುಗ' ಸರಿಯಾದ 25 ನೆಯ ಚಿತ್ರ" ಎನ್ನುತ್ತಾರೆ ನಟಿ.