ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ವಿಷ್ಟು ವರ್ಧನ್ ಸಿನಿಮಾಗಳ ಹೆಸರಿನ ಚಿತ್ರಗಳ ಸರಣಿ ಮುಂದುವರೆದಿದ್ದು, ಕೋಟಿಗೊಬ್ಬ-2, ನಾಗರಹಾವು ಬಳಿಕ ಇದೀಗ ಸಿಂಹಾದ್ರಿಯ ಸಿಂಹ ಈ ಪಟ್ಟಿಗೆ ನೂತನವಾಗಿ ಸೇರ್ಪಡೆಯಾಗುತ್ತಿದೆ.
2002ರಲ್ಲಿ ತೆರೆಕಂಡು ಭಾರಿ ಸದ್ದು ಮಾಡಿದ್ದ ಸಿಂಹಾದ್ರಿಯ ಸಿಂಹ ಚಿತ್ರದ ಹೆಸರಲ್ಲೇ ಮತ್ತೊಂದು ಚಿತ್ರ ಸೆಟ್ಟೇರುತ್ತಿದ್ದು, ಸಿಂಹಾದ್ರಿಯ ಸಿಂಹ-2 ಹೆಸರಿನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಸಿಂಹಾದ್ರಿಯ ಸಿಂಹ ನಿರ್ಮಾಣ ಮಾಡಿದ್ದ ನಿರ್ಮಾಪಕ ವಿಜಯ್ ಕುಮಾರ್ ಅವರೇ ಈ ಚಿತ್ರವನ್ನು ಕೂಡ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಸಿಂಹಾದ್ರಿಯ ಸಿಂಹ-2 ಎಂಬ ಶೀರ್ಷಿಕೆಯನ್ನು ಕೂಡ ರಿಜಿಸ್ಟರ್ ಮಾಡಿಸಿದ್ದಾರೆ.
ಅಂತೆಯೇ ಈ ಹಿಂದೆ ಸಿಂಹಾದ್ರಿಯ ಸಿಂಹ ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಅವರೇ ಈ ಚಿತ್ರದ ನಿರ್ದೇಶನ ಕೂಡ ಮಾಡಲಿದ್ದಾರೆ ಎಂದು ವಿಜಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಇನ್ನು ಚಿತ್ರದ ನಾಯಕನ ಪಾತ್ರಕ್ಕೆ ನಿರ್ಮಾಪಕ ವಿಜಯ್ ಕುಮಾರ್ ಅವರ ಮೊದಲ ಆಯ್ಕೆ ಕಿಚ್ಚ ಸುದೀಪ್ ಆಗಿದ್ದು, ಅವರನ್ನೇ ಆಯ್ಕೆ ಮಾಡುವ ಕುರಿತ ಪ್ರಯತ್ನಿಸುತ್ತಿದ್ದಾರೆ. ಆದರೆ ಈವರೆಗೂ ಸುದೀಪ್ ಅವರಿಂದ ಅಧಿಕೃತ ಒಪ್ಪಿಗೆ ದೊರೆತಿಲ್ಲ. ಹೀಗಾಗಿ ಸಿಂಹಾದ್ರಿಯ ಸಿಂಹ-2 ಚಿತ್ರ ಇನ್ನೂ ಮಾತುಕತೆಯ ಹಂತದಲ್ಲೇ ಇದ್ದು, ಇನ್ನಷ್ಟೇ ಕಲಾವಿದರ ಹಾಗೂ ತಂತ್ರಜ್ಞರ ಆಯ್ಕೆಯಾಗಬೇಕಿದೆ.