ಡ್ರಾಮಾ ಜ್ಯೂನಿಯರ್ಸ್ ನ ಪೋಸ್ಟರ್
ಗದಗ: ಕನ್ನಡಿಗರ ಅದರಲ್ಲೂ ಮುಖ್ಯವಾಗಿ ಮಕ್ಕಳ ಮನಸೂರೆಗೊಂಡಿದ್ದ ಜ್ಹೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜ್ಯೂನಿಯರ್ಸ್ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಗದಗದಲ್ಲಿ ಇದೀಗ ತಾನೆ ಆರಂಭಗೊಂಡಿದೆ.
ಈ ಹಿನ್ನೆಲೆಯಲ್ಲಿ ಗದಗ ನಗರದಲ್ಲಿ ಹಬ್ಬದ ವಾತಾವರಣ ನೆಲೆಸಿದೆ. ಇಂದು ಸಂಜೆ ನಡೆಯಲಿರುವ ಗ್ರ್ಯಾಂಡ್ ಫಿನಾಲೆಗಾಗಿ ಇಲ್ಲಿನ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಭವ್ಯವಾದ ವೇದಿಕೆ ನಿರ್ಮಿಸಲಾಗಿದೆ. ನಾ ಮುಂದು ತಾ ಮುಂದು ಎಂದು ಮಕ್ಕಳು ಹರುಷದಿಂದ ಪಾಲ್ಗೊಳ್ಳುತ್ತಿರುವುದು ಕಂಡುಬಂದಿತು. ಇಡೀ ನಗರದಲ್ಲಿ ಸಂಭ್ರಮದ ವಾತಾವರಣ ಉಂಟಾಗಿದೆ. ಪಾಲಕರು ತಮ್ಮ ಮಕ್ಕಳನ್ನು ನೆಚ್ಚಿನ ಕಾರ್ಯಕ್ರಮ ಕಣ್ಮುಂದೆಯೇ ನೇರವಾಗಿ ವೀಕ್ಷಿಸಲು ಕರೆದೊಯ್ಯುತ್ತಿರುವುದು ಸಾಮಾನ್ಯವಾಗಿದೆ.
ಡ್ರಾಮಾ ಜ್ಯೂನಿಯರ್ಸ್ ಗ್ರ್ಯಾಂಡ್ ಫಿನಾಲೆ ನಮ್ಮ ಊರಿನಲ್ಲಿ ನಡೆಯುತ್ತಿರುವುದು ತುಂಬ ಖುಷಿ ತಂದಿದೆ ಎಂದು ಗದಗದ ಸ್ಪರ್ಧಾಳು ಪುಟ್ಟರಾಜ ಹೇಳುತ್ತಾನೆ.
ಅಂತಿಮ ಸುತ್ತಿನಲ್ಲಿ ಅಚಿಂತ್ಯ, ತುಷಾರ್, ಪುಟ್ಟರಾಜು, ಅಮೋಘ, ಚಿತ್ರಾಲಿ, ಮಹೀಂದ್ರ, ರೇವತಿ ಮತ್ತು ತೇಜಸ್ವಿನಿ ಇದ್ದಾರೆ. 8 ಜನ ಸ್ಪರ್ಧಿಗಳಲ್ಲಿ ಪುಟ್ಟರಾಜು ಮತ್ತು ಅಚಿಂತ್ಯರ ನಡುವೆ ತೀವ್ರ ಪೈಪೋಟಿಯಿದೆ ಎನ್ನಲಾಗುತ್ತಿದೆ. ಅಮೋಘ ಮತ್ತು ಚಿತ್ರಾಲಿ ಕೂಡ ತೀವ್ರ ಸ್ಪರ್ಧೆಯೊಡ್ಡಿದ್ದಾರೆ. ವಿಜಯದ ಮಾಲೆ ಯಾರ ಕೊರಳಿಗೆ ಬೀಳುತ್ತದೆ ಕಾದು ನೋಡಬೇಕು.