'ಕಿರಿಕ್ ಪಾರ್ಟಿ' ಚಿತ್ರದ ಪೋಸ್ಟರ್
ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಮೊದಲ ಬಾರಿಗೆ ನಿರ್ಮಿಸಿ, ನಟಿಸಿದ ರಿಷಬ್ ಶೆಟ್ಟಿ ನಿರ್ದೇಶಿಸಿದ 'ಕಿರಿಕ್ ಪಾರ್ಟಿ' ಈ ವಾರ ಯಶಸ್ವಿಯಾಗಿ ಶತದಿನ ಪೂರೈಸಿದೆ. ಪುಷ್ಕರ್ ಫಿಲಂಸ್ ಸಹಯೋಗದೊಂದಿಗೆ ಪರಮಾವಹ್ ಸ್ಟುಡಿಯೋಸ್ ನಿರ್ಮಿಸಿದ್ದ ಈ ಚಿತ್ರ ಡಿಸೆಂಬರ್ ೩೦ ರಂದು ಬಿಡುಗಡೆಯಾಗಿತ್ತು ಮತ್ತು ಜಯಣ್ಣ ಫಿಲಂಸ್ ಇದನ್ನು ವಿತರಿಸಿತ್ತು. ಇದು ರಕ್ಷಿತ್ ವೃತ್ತಿ ಜೀವನದಲ್ಲಿಯೇ ಅತಿ ದೊಡ್ಡ ಬ್ಲಾಕ್ ಬಸ್ಟರ್ ಸಿನೆಮಾ ಎನಿಸಿಕೊಂಡದ್ದಲ್ಲದೆ, ರಕ್ಷಿತ್ ಮುಂದಿನ ಸ್ಟಾರ್ ನಟ ಎಂದು ಬಿಂಬಿಸುವಷ್ಟು ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು. ಈಗ ಸಿನೆಮಾ ಹೂಡಿಕೆಗಿಂತ ಈಗ ೧೦ ಪಟ್ಟು ಲಾಭ ಗಳಿಸಿದೆ ಎನ್ನಲಾಗಿದೆ.
ಪರಮಾವಹ್ ಸ್ಟುಡಿಯೋಸ್ ಕೆಳಗೆ ಕೆಲಸ ಮಾಡಿರುವ ಎಲ್ಲರಿಗು ಇದರ ಶ್ರೇಯಸ್ಸನ್ನು ಅರ್ಪಿಸುವ ರಕ್ಷಿತ್ ಕೇವಲ ಯಶಸ್ಸನ್ನಷ್ಟೇ ಹಂಚಿಕೊಳ್ಳದೆ ಲಾಂಭಾಂಶದ ಒಂದು ಭಾಗವನ್ನು ತಂಡದೊಂದಿಗೆ ಹಂಚಿಕೊಂಡು ಹೃದಯವಂತಿಕೆ ಮೆರೆದಿದ್ದಾರೆ. ಮೂಲಗಳ ಪ್ರಕಾರ ಲಾಭಾಂಶದ ೨೫% ಭಾಗವನ್ನು ತಂಡದ ೭೦ ಸದಸ್ಯರೊಂದಿಗೆ ಹಂಚಿಕೊಳ್ಳಲಾಗಿದೆ. ೨೨ ಲೈಟ್ ಮ್ಯಾನ್ ಗಳು, ಮೇಕಪ್ ಮಾಡಿದವರು, ವಸ್ತ್ರ ವಿನ್ಯಾಸಕರು ಮತ್ತು ೮ ಜನ ನಿರ್ಮಾಣ ಸಿಬ್ಬಂದಿಗಳನ್ನು ಒಳಗೊಂಡಂತೆ ಎಲ್ಲರು ೫೦,೦೦೦ ರೂ ಪಡೆದಿದ್ದಾರೆ.
ಹೊಸಬರನ್ನು ಸೇರಿಸಿ ನಟರಿಗೂ ಕೂಡ ಲಕ್ಷಗಳಲ್ಲಿ ಲಾಭವನ್ನು ಹಂಚಿಕೊಳ್ಳಲಾಗಿದೆ. "'ಕಿರಿಕ್ ಪಾರ್ಟಿ' ಸಿನೆಮಾಗೆ ಅತಿ ಕಡಿಮೆ ಬಜೆಟ್ ನಲ್ಲಿ ಕೆಲಸ ಮಾಡಿದ್ದೇನೆ. ಪ್ರತಿ ಲೈಟ್ ಮ್ಯಾನ್ ಗಳು ಹೆಚ್ಚುವರಿ ಶುಲ್ಕ ಕೇಳದೆ ಹೆಚ್ಚುವರಿ ಸಮಯ ಕೆಲಸ ಮಾಡಿದ್ದಾರೆ. ಆದುದರಿಂದ ಇಂದು ಯಶಸ್ಸು ಒದಗಿ ಬಂದಿರುವಾಗ, ಲಾಭಾಂಶವನ್ನು ಅವರ ಜೊತೆಗೆ ಹಂಚಿಕೊಳ್ಳುವುದು ಸೂಕ್ತ ಎಂದೆನಿಸಿತು. ೭೫% ಲಾಭವನ್ನು ಪರಾಂವಹ್ ಸ್ಟುಡಿಯೋಸ್ ಜೊತೆಗೆ ಇಟ್ಟುಕೊಂಡು ಉಳಿದಿದ್ದನ್ನು ತಂಡದ ಜೊತೆಗೆ ಹಂಚಿಕೊಳ್ಳಲು ನಿಶ್ಚಯಿಸಿದೆ" ಎನ್ನುತ್ತಾರೆ ರಕ್ಷಿತ್.
ಒಳ್ಳೆಯ ಸಿನೆಮಾಗಳ ನಿರ್ಮಾಣವನ್ನು ಮುಂದುವರೆಸುವುದಾಗಿ ಹೇಳುವ ರಕ್ಷಿತ್ "ಸಿನೆಮಾ ಉದ್ಯಮ ಜೂಜಿದ್ದಂತೆ. ಸಿನೆಮಾ ಗೆದ್ದರೆ ದುಡ್ಡು ಮಾಡುತ್ತೀರಿ ಅದು ಸೋತರೆ ಎಲ್ಲವನ್ನು ಕಳೆದುಕೊಳ್ಳುತ್ತೀರಿ. ಮುಂದೆಯೂ ಸಣ್ಣ ಬಜೆಟ್ ಸಿನೆಮಾಗಳನ್ನು ಮಾಡುವ ಭರವಸೆ ನನಗಿದೆ. ನನ್ನ ಕೆಲಸದಲ್ಲಿ ನಂಬಿಕೆ ಇಡುವ ಬಳಗವಿದೆ" ಎನ್ನುತ್ತಾರೆ ನಟ,.
'ಕಿರಿಕ್ ಪಾರ್ಟಿ' ಎರಡನೇ ಭಾಗ ಬರಬಹುದು ಆದರೆ ಸದ್ಯಕ್ಕಿಲ್ಲ ಎನ್ನುವ ರಕ್ಷಿತ್ "ಅದು ಕಾಲೇಜ್ ಕಥೆಯಾಗದೆ ಇರಬಹುದು, ಗೆಳೆಯರೊಂದಿಗೆ ಪಯಣವಾಗಿರಬಹುದು" ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics