

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ವಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿರುವ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಪಕ್ಷಗಳು ಇಂದು ಸುಪ್ರೀಂಕೋರ್ಟ್ ವರೆಗೆ ಬೃಹತ್ ಮೆರವಣಿಗೆ ನಡೆಸುತ್ತಿವೆ.
ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ನಿಮ್ಮ ಸರ್ಕಾರದ 200 ಅಧಿಕಾರಿಗಳು ನಮ್ಮ ಸಂಪರ್ಕದಲ್ಲಿದ್ದಾರೆ. ನಮಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿದರು.
ಮುಖ್ಯ ಚುನಾವಣಾ ಆಯುಕ್ತ ಜ್ವಾನೇಶ್ ಕುಮಾರ್ ತಮ್ಮನ್ನು ಸಂಪರ್ಕಿಸಿದ್ದರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ತಮಗೆ ಸಂದೇಶಗಳು ಬಂದಿವೆ. ಸಿಇಸಿ (CEC) ಅವರು 'ಸಾಕ್ಷಿದಾರರಾಗಿ' (ಸರ್ಕಾರಿ ಸಾಕ್ಷಿಯಾಗಿ) ಬದಲಾಗಿ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.
"ಹೌದು, ನನಗೆ ಸಂದೇಶಗಳು ಬರುತ್ತವೆ. ಅವರಿಗೆ ನನ್ನ ಪ್ರತಿಕ್ರಿಯೆ ಏನೆಂದರೆ, 'ಸಾಕ್ಷಿದಾರರಾಗಿ ಬದಲಾಗಿ'. ರಾಜೀನಾಮೆ ನೀಡಿ, ದಾರಿಯಿಂದ ಪಕ್ಕಕ್ಕೆ ಸರಿಯಿರಿ. ಅದು ದೇಶಕ್ಕೆ ಸಲ್ಲಿಸುವ ಸೇವೆಯಾಗುತ್ತದೆ. ನಿಮ್ಮ ಮೇಲಿರುವ ಒತ್ತಡದ ಸ್ವರೂಪ ನಮಗೆ ಅರ್ಥವಾಗುತ್ತದೆ ಎಂದರು.
ಸುಪ್ರೀಂ ಕೋರ್ಟ್‌ಗೆ 'ಇಂಡಿಯಾ' ಮೈತ್ರಿಕೂಟದ ಯೋಜಿತ ಮೆರವಣಿಗೆಗಾಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದಾಗ, "ನಮ್ಮ ಯುವಕರನ್ನು ಯಾಕೆ ಹೊಡೆಯುವಂತೆ ಹೇಳಲಾಗುತ್ತಿದೆ ಎಂದು ಕೆಲವು ಪೊಲೀಸ್ ಸಿಬ್ಬಂದಿ ಪ್ರಶ್ನಿಸುತ್ತಿದ್ದರು ಕೇಂದ್ರ ಗೃಹ ಸಚಿವಾಲಯ ಮತ್ತು ವಿವಿಧ ಅರೆಸೇನಾ ಪಡೆಗಳ ಒಳಗಡೆಯೇ ಈ ಪ್ರಶ್ನೆ ಎದ್ದಿದೆ. ಶೇಕಡಾ 50 ರಷ್ಟು ಪೊಲೀಸ್ ಸಿಬ್ಬಂದಿ, 'ನೀವು ಮಾಡುತ್ತಿರುವುದು ಸರಿ, ಅದನ್ನು ಮುಂದುವರಿಸಿ' ಎಂದು ನಮಗೆ ಹೇಳುತ್ತಿದ್ದಾರೆ ಎಂದು ರಾಹುಲ್ ನುಡಿದರು.
ಸುಪ್ರೀಂ ಕೋರ್ಟ್‌ಗೆ 'ಇಂಡಿಯಾ' (INDIA) ಮೈತ್ರಿಕೂಟವು ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಿಧಿಸಲಾದ ಭದ್ರತಾ ನಿರ್ಬಂಧಗಳ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದರು ಹಾಗೂ ಜನರ ಓಡಾಟವನ್ನು ಯಾಕೆ ನಿರ್ಬಂಧಿಸಲಾಗುತ್ತಿದೆ ಎಂದು ಕೇಳಿದರು. "ಇಂದು ದೆಹಲಿಯನ್ನು ಯಾಕೆ ಜೈಲಿನಂತೆ ಮಾಡಲಾಗಿದೆ? ದೆಹಲಿ ಒಂದು ಕೋಟೆಯಂತಾಗಿದೆ ಎಂದು ರಾಹುಲ್ ಹೇಳಿದರು.
ನಗರದಾದ್ಯಂತ ನಿಯೋಜಿಸಲಾಗಿದ್ದ ಡಜನ್‌ಗಟ್ಟಲೆ ಬಸ್‌ಗಳು, ಗಲಭೆ ನಿಯಂತ್ರಣ ವಾಹನಗಳು ಮತ್ತು ವಾಟರ್ ಕ್ಯಾನನ್‌ಗಳನ್ನು (ನೀರಿನ ಫಿರಂಗಿ ವಾಹನಗಳು) ತೋರಿಸುತ್ತಾ, 30,000 ಭದ್ರತಾ ಸಿಬ್ಬಂದಿ ಯಾಕೆ ರಸ್ತೆಗಳಲ್ಲಿದ್ದಾರೆ? ವಿರೋಧ ಪಕ್ಷದ ಮೆರವಣಿಗೆಗೂ ಮುನ್ನ ಇಷ್ಟೊಂದು ದೊಡ್ಡ ಪ್ರಮಾಣದ ಭದ್ರತಾ ನಿಯೋಜನೆಯ ಅಗತ್ಯವಿದೆಯೇ ಎಂದು ಅವರು ಪ್ರಶ್ನಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಮೋದಿ ಸರ್ಕಾರ ರಕ್ಷಿಸುತ್ತಿದೆ ಎಂದು ಆರೋಪಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸರ್ಕಾರವು "ದೊಡ್ಡ ತಪ್ಪು" ಮಾಡುತ್ತಿದೆ. ಇದು ಸಾರ್ವಜನಿಕರು ಮತ್ತು ಮೋದಿ, ಶಾ ಹಾಗೂ ಜ್ಞಾನೇಶ್ ನಡುವಿನ ಹೋರಾಟವಾಗಿದೆ ಎಂದು ಹೇಳಿದರು.