ಸಿನಿಮಾ ಸುದ್ದಿ

ಶೂಟಿಂಗ್ ನಲ್ಲಿ ಗಣೇಶ್ ಬ್ಯುಸಿ, ವಿರಾಮಕ್ಕೇ ಬ್ರೇಕ್!

Sumana Upadhyaya
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೈತುಂಬಾ ಉತ್ತಮ ಸಿನಿಮಾಗಳು ಇವೆ. ಎಡೆಬಿಡದೆ ಶೂಟಿಂಗ್ ನಲ್ಲಿ ತೊಡಗಿಸಿಕೊಳ್ಳಲಿರುವ ಗಣೇಶ್ ಅವರಿಗೆ ವಿರಾಮ ತೆಗೆದುಕೊಳ್ಳಲು ಸದ್ಯಕ್ಕೆ ಸಮಯವಿಲ್ಲ.
ಅವರ ಅಭಿನಯದ ಪಟಾಕಿ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರಲ್ಲಿ ಗಣೇಶ್ ಅವರು ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ರನ್ಯಾ ಮತ್ತು ಪ್ರಿಯಾಂಕಾ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಮಂಜು ಸ್ವರಾಜ್ ನಿರ್ದೇಶನದ ಚಿತ್ರ ಪಟಾಕಿ ಮೇ ತಿಂಗಳಲ್ಲಿ ಬಿಡುಗಡೆಗೆ ಕಾಯುತ್ತಿದ್ದರೆ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮುಗುಳು ನಗೆ ಚಿತ್ರ ಕೂಡ ಅಂತಿಮ ಹಂತದಲ್ಲಿದೆ. ಇದರ ಕೊನೆಯ ದೃಶ್ಯಗಳನ್ನು ಬಾರ್ಕೂರಿನಲ್ಲಿ ಚಿತ್ರಿಸಲಾಗುತ್ತಿದೆ. ಈ ತಿಂಗಳ 10ರ ಹೊತ್ತಿಗೆ ಮುಗುಳು ನಗೆಯ ಶೂಟಿಂಗ್ ಮುಗಿಯುವ ಹಂತದಲ್ಲಿದೆ.
9 ವರ್ಷಗಳ ನಂತರ ಯೋಗರಾಜ್ ಭಟ್-ಗಣೇಶ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ ಮುಗುಳು ನಗೆಯಾಗಿದ್ದು, ಇದರಲ್ಲಿ ಅಪೂರ್ವ, ಅಶಿಕಾ ರಂಗನಾಥ್ ಮತ್ತು ನಿಖಿತಾ ನಾರಾಯಣ್ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಅಮೂಲ್ಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಗಣೇಶ್ ಅವರ ಮುಂದಿನ ಚಿತ್ರ ಚಮಕ್. ಸುನಿ ನಿರ್ದೇಶನದಲ್ಲಿ ತಯಾರಾಗಲಿರುವ ಚಿತ್ರಕ್ಕೆ ನಾಳೆ ಮುಹೂರ್ತ ನಡೆಯಲಿದೆ. ಈ ತಿಂಗಳ 14ರಿಂದ ಶೂಟಿಂಗ್ ಆರಂಭವಾಗಲಿದೆ. ಚಂದ್ರಶೇಖರ್ ಅವರು ನಿರ್ಮಿಸುತ್ತಿರುವ ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ.
ಅರ್ಜುನ್ ಜನ್ಯ ಅವರ ಸಂಗೀತ, ಕರ್ಮ್ ಚಾವ್ಲಾ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
SCROLL FOR NEXT