ಚೆನ್ನೈ: ತಮಿಳು ಕಿರುತೆರೆ ನಟಿ ನಂದಿನಿ ಪತಿ ಕಾರ್ತಿಕ್ ಸೋಮವಾರ ರಾತ್ರಿ ಇಲ್ಲಿಯ ಲಾಡ್ಜ್‌ವೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೋಮವಾರ ಲಾಡ್ಜ್ ನಲ್ಲಿ ಕಾರ್ತಿಕ್ ಉಳಿದುಕೊಂಡಿದ್ದರು. ಮಂಗಳವಾರ ಬೆಳಗ್ಗೆ ಲಾಡ್ಜ್ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಕಾರ್ತಿಕ್ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.
30 ವರ್ಷದ ಕಾರ್ತಿಕ್ ಚೆನ್ನೈನಲ್ಲಿ ಜಿಮ್‌ವೊಂದನ್ನು ನಡೆಸುತ್ತಿದ್ದರು. 8 ತಿಂಗಳ ಹಿಂದಷ್ಟೇ ನಂದಿನಿಯನ್ನು ಮದುವೆಯಾಗಿದ್ದರು.
ಕಾರ್ತಿಕ್ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತಮ್ಮ ಮಾವನ ವಿರುದ್ಧ ಆರೋಪ ಮಾಡಿದ್ದಾರೆ. ಆರ್ಥಿಕ ಸಂಕಷ್ಟಗಳಿಂದ ಜಿಮ್‌ನ್ನು ಮುಚ್ಚಿದ್ದ ಕಾರ್ತಿಕ್ ಇತ್ತೀಚೆಗೆ ನಂದಿನಿಯಿಂದ ದೂರವಿದ್ದರು ಎನ್ನಲಾಗಿದೆ.
ಇನ್ನೂ ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನಂದಿನಿ ತಮ್ಮ ವೈವಾಹಿಕ ಜೀವನದಲ್ಲಿದ್ದ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ, ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿಕೊಂಡು ತನ್ನ ಪತಿ ಹಲವರಿಂದ ಹಣ ಪಡೆದುಕೊಂಡಿದ್ದರು. ಹಣ ವಾಪಸ್ ಕೊಡಬೇಕೆಂದು ಕೆಲ ಮಂದಿ ಆಕೆಯ ಬಳಿ ಕೇಳಿದಾಗ ತನ್ನ ಗಂಡನ ವಂಚನೆ ಬಗ್ಗೆ ಅರಿವಾಯಿತೆಂದು ನಂದಿನಿ ಹೇಳಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದಾಗ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದರು ಹೀಗಾಗಿ ನನ್ನ ಪೋಷಕರು ನನ್ನನ್ನು ಅವರ ಮನೆಗೆ ಕರೆದೊಯ್ದಿದ್ದರು ಎಂದು ನಂದಿನಿ ಹೇಳಿದ್ದಾರೆ.
ಕಾರ್ತಿಕ್ ಗೆ ಒಬ್ಬ ಯುವತಿ ಜೊತೆ ಸಂಬಂಧ ಇತ್ತು, ಆಕೆ ಆತ್ಮಹತ್ಯೆ ಮಾಡಿಕೊಂಡಾಗ ಪೊಲೀಸರು ನನ್ನ ಪತಿಯನ್ನು ಬಂಧಿಸಿದ್ದರು. ಈ ವಿಷಯ ನನ್ನ ಪೋಷಕರು ಸೇರಿದಂತೆ ಯಾರೋಬ್ಬರಿಗೂ ಈ ಬಗ್ಗೆ ತಿಳಿದಿರಲಿಲ್ಲ, ಆತ ಎಲ್ಲಿ ಎಂದು ವಿಚಾರಿಸಿದಾಗ ಕಾರ್ತಿಕ್ ದುಬೈಗೆ ತೆರಳಿದ್ದಾರೆ ಎಂದುರಹಸ್ಯವಾಗಿ ಇರಿಸಿದ್ದೆ, ಎಲ್ಲಾ ನೋವುಗಳನ್ನು ನನ್ನ ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡಿದ್ದೇನೆ ಎಂದು ನಂದಿನಿ ತಿಳಿಸಿದ್ದಾರೆ.
ನಾನು ಆತನನ್ನು ತುಂಬಾ ಪ್ರೀತಿಸುತ್ತಿದ್ದೆ, ಕಾರ್ತಿಕ್ ಕೇವಲ ನನ್ನ ಹಣಕ್ಕಾಗಿ ಮಾತ್ರ ನನ್ನನ್ನು ವಿವಾಹವಾಗಿದ್ದ ಎಂದು ಅವರು ತಿಳಿಸಿದ್ದಾರೆ.