ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಬಳಿಕ ಕುಟುಂಬ ಸದಸ್ಯರೊಂದಿಗಿರುವ ಬಾಲಿವುಡ್ ಹಿರಿಯ ನಟ ವಿನೋದ್ ಖನ್ನಾ
ಮುಂಬೈ: ನಿರ್ಜಲೀಕರಣ ಸಮಸ್ಯೆಯಿಂದಾಗಿ ಕಳೆದ ವಾರ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಹಿರಿಯ ನಟ ವಿನೋದ್ ಖನ್ನಾ (70) ಅವರು ಆರೋಗ್ಯವಾಗಿದ್ದು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದಾರೆಂದು ವೈದ್ಯರು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.
ನಿರ್ಜಲೀಕರಣದಿಂದ ಬಳಲುತ್ತಿದ್ದ ವಿನೋದ್ ಖನ್ನಾ ಅವರು ಕಳೆದ ವಾರ ಸರ್ ಹೆಚ್'ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಾಗಿದ್ದರು.
ವಿನೋದ್ ಖನ್ನಾ ಆವರ ಆರೋಗ್ಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳ ಸುದ್ದಿಗಳು ಓಡಾಡುತ್ತಿವೆ. ಖನ್ನಾ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ.
ಈ ಹಿನ್ನಲೆಯಲ್ಲಿ ಆಸ್ಪತ್ರೆಯ ವಕ್ತಾರರು ಸ್ಪಷ್ಟನೆ ನೀಡಿದ್ದು, ವಿನೋದ್ ಖನ್ನಾ ಅವರು ಸಂಪೂರ್ಣ ವೈದ್ಯರ ಆರೈಕೆಯಲ್ಲಿದ್ದು, ವೈದ್ಯರ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದಾರೆ. ಆವರ ಆರೋಗ್ಯ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಇನ್ನು ವಿನೋದ್ ಖನ್ನಾ ಅವರ ಕುಟುಂಬ ಸದಸ್ಯರು ವಿನೋದ್ ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿದ್ದು, ವಿನೋದ್ ಅವರ ಖಾಸಗಿತನಕ್ಕೆ ಗೌರವ ಕೊಡುವಂತೆ ಮನವಿ ಮಾಡಿದ್ದಾರೆ.
ವಿನೋದ್ ಖನ್ನಾ ಅವರ ಪುತ್ರ ರಾಹುಲ್ ಮಾತನಾಡಿ, ಮಾರ್ಚ್ 31 ರಂದು ನನ್ನ ತಂದೆ ತೀವ್ರ ನಿರ್ಜಲೀಕರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ಕರೆತಂದ ಬಳಿಕ ಅವರ ಆರೋಗ್ಯ ಸ್ಥಿತಿ ಸುಧಾರಿಸಿತು. ಇದೀಗ ಆವರ ಆರೋಗ್ಯ ಉತ್ತಮವಾಗಿದ್ದು, ಶೀಘ್ರದಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆಂದು ವೈದ್ಯರು ಹೇಳಿದ್ದಾರೆಂದು ಹೇಳಿದ್ದಾರೆ.