ದೃಶ್ಯ ಸಿನಿಮಾದಲ್ಲಿ ರವಿಚಂದ್ರನ್ ಅವರ ಮಗಳ ಪಾತ್ರದಲ್ಲಿ ಮಿಂಚಿದ್ದ ಗ್ಲಾಮರ್ ಡಾಲ್ ಆರೋಹಿ ನಾರಾಯಣ್ (ಸ್ವರೂಪಿಣಿ) ಮೂರು ವರ್ಷಗಳ ನಂತರ ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ನಟಿಸುತ್ತಿದ್ದಾರೆ.
ಕಾರ್ತಿಕ್ ಸರಗೂರ್ ನಿರ್ದೇಶನದ, ಪುಷ್ಕರ್ ಫಿಲಮ್ಸ್ ಹಾಗೂ ಮೇಮಂತ್ ಎಂ ರಾವ್ ಸಹಯೋಗದ ನಿರ್ಮಾಣದ ಚಿತ್ರದಲ್ಲಿ ಆರೋಹಿ ನಟಿಸುತ್ತಿದ್ದು, ಕಿರಿಕ್ ಪಾರ್ಟಿಯಲ್ಲಿ ನಟಿಸಿದ್ದ ಅರವಿಂದ್ ಐಯ್ಯರ್ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾಗೆ ಇನ್ನಷ್ಟೇ ಹೆಸರಿಡಬೇಕಿದೆ. ಅರೋಹಿ ಅವರ ಸಾಮರ್ಥ್ಯವನ್ನು ಕಂಡು ಚಿತ್ರಕ್ಕೆ ಆಯ್ಕೆ ಮಾಡಿರುವುದಾಗಿ ಪುಷ್ಕರ್ ಹೇಳಿದ್ದು, ಇದೊಂದು ಅದ್ಭುತವಾದ ಅವಕಾಶವಾಗಿದ್ದು ಅತ್ಯುತ್ತಮ ಪ್ರದರ್ಶನ ನೀಡುವುದಾಗಿ ಆರೋಹಿ ಹೇಳಿದ್ದಾರೆ.
ಮೊದಲ ಸಿನಿಮಾದ ನಂತರ ಬ್ರೇಕ್ ತೆಗೆದುಕೊಂಡಿದ್ದರ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಆರೋಹಿ, ಮೊದಲ ಸಿನಿಮಾದ ನಂತರ ಯಾವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲದಲ್ಲಿದ್ದೆ. ಈ ಹಿನ್ನೆಲೆಯಲ್ಲಿ ನಾನು ವಿದ್ಯಾಭ್ಯಾಸವನ್ನು ಮುಂದುವರೆಸಲು ತೀರ್ಮಾನಿಸಿ ಎಂಬಿಎ ಆಯ್ಕೆ ಮಾಡಿಕೊಂಡೆ. ಈಗ ಅಂತಿಮ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಸಿನಿಮಾದ ವೃತ್ತಿ ಜೀವನಕ್ಕೂ ಹೆಚ್ಚಿನ ಆದ್ಯತೆ ನೀಡುವುದಾಗಿ ಆರೋಹಿ ಹೇಳಿದ್ದಾರೆ.