'ಮಫ್ತಿ' ಸಿನೆಮಾದಲ್ಲಿ ಶ್ರೀಮುರಳಿ ಮತ್ತು ಶಾನ್ವಿ ಶ್ರೀವಾಸ್ತವ
ಬೆಂಗಳೂರು: ಬೆಂಗಳೂರಿನ ಸುತ್ತಮುತ್ತ ಶ್ರೀಮುರಳಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 'ಮಫ್ತಿ' ಸಿನೆಮಾದ ಚಿತ್ರೀಕರಣ ಭರದಿಂದ ಸಾಗಿದೆ. ಈಗ ಮೂರನೇ ಹಂತದ ಚಿತ್ರೀಕರಣಕ್ಕೆ ನಟ ಸಜ್ಜಾಗಿದ್ದು, ಇದು ೧೦ ದಿನಗಳ ಕಾಲ ಮುಂದುವರೆಯಲಿದೆ.
"ಪ್ರತಿ ಹಂತದಲ್ಲೂ ಏನಾದರೊಂದು ದೊಡ್ಡದು ಸಂಭವಿಸುತ್ತದೆ. ನಾವು ಸೆಟ್ ಗೆ ತೆರಳುವ ಮುಂಚೆಯೇ ಸಾಕಷ್ಟು ಯೋಜನೆ ರೂಪಿಸಿಕೊಂಡಿರುತ್ತೇವೆ. ಆದರೆ ಸೆಟ್ ನಲ್ಲಿಯೇ ಸಾಕಷ್ಟು ಬದಲಾವಣೆಗಳಾಗುತ್ತವೆ. ಏಕೆಂದರೆ ಶಿವರಾಜ್ ಕುಮಾರ್ ಅವರ ಅನುಭವ ಮತ್ತು ಉಪಸ್ಥಿತಿ" ಎನ್ನುತ್ತಾರೆ ಮುರಳಿ.
ಶಾನ್ವಿ ಶ್ರೀವಾಸ್ತವ ಮುರಳಿ ಎದುರಿಗೆ ನಟಿಸುತ್ತಿದ್ದು, ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ರೋಮ್ಯಾನ್ಸ್ ದೃಶ್ಯಗಳನ್ನು ಶ್ರೀಮುರಳಿ ಅಷ್ಟೇನೂ ಲೀಲಾಜಾಲವಾಗಿ ನಟಿಸುವುದಿಲ್ಲ ಎಂಬುದು ಅಚ್ಚರಿಯ ಸಂಗತಿ. "ಇದು ಏತಕ್ಕೆ ಗೊತ್ತಿಲ್ಲ, ಆದರೆ ಆಕ್ಷನ್ ದೃಶ್ಯಗಳಿಗೆ ಹೋಲಿಸಿದರೆ ರೋಮ್ಯಾನ್ಸ್ ದೃಶ್ಯಗಳನ್ನು ಮಾಡುವುದಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತೇನೆ" ಎನ್ನುವ ನಟ "ಇದಕ್ಕಾಗಿ ಹೆಚ್ಚು ಅಭ್ಯಾಸ ಮಾಡುತ್ತಿದ್ದೇನೆ ಮತ್ತು ಉತ್ತಮಪಡಿಸಿಕೊಳ್ಳಲಿದ್ದೇನೆ" ಎನ್ನುತ್ತಾರೆ ಮುರಳಿ.
ನಾರ್ಥನ್ ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿರುವ ಈ ಸಿನೆಮಾವನ್ನು ಜಯಣ್ಣ ಕಂಬೈನ್ಸ್ ನಿರ್ಮಿಸುತ್ತಿದೆ. ರವಿ ಬಸರೂರ್ ಸಂಗೀತ ನೀಡಿದ್ದು, ನವೀನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಈ ಮಧ್ಯೆ 'ಮಫ್ತಿ'ಯ ನಂತರವೂ ಜಯಣ್ಣ ನಿರ್ಮಾಣದಲ್ಲಿ ಮುರಳಿ ಮತ್ತೊಂದು ಸಿನೆಮಾ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಟ ವಿವರಗಳನ್ನು ತಿಳಿಸುವುದಿಲ್ಲವಾದರೂ, ಸ್ಕ್ರಿಪ್ಟ್ ಈಗಾಗಲೇ ಸಿದ್ಧವಾಗಿದ್ದು ಅಧಿಕೃತ ಘೋಷಣೆಯಾಗಬೇಕಿದೆ ಎನ್ನಲಾಗಿದೆ.