ಬೆಂಗಳೂರು: ಮಹಾಕಾವ್ಯ ಮಹಾಭಾರತದಿಂದ ಸ್ಫೂರ್ತಿ ಪಡೆದು ಈಗ ಅದನ್ನು ಕನ್ನಡ ಸಿನೆಮಾಗೆ ಅಳವಡಿಸಿಕೊಳ್ಳಲು ಪಗಡೆಯಾಟ ಪ್ರಾರಂಭವಾಗಿದೆ. ಹಲವು ನಿರ್ಮಾಪಕರು ಮಹಾಭಾರತವನ್ನು ಬೆಳ್ಳಿತೆರೆಗೆ ತರಲು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ.
ಇತ್ತ ಎಸ್ ಎಸ್ ರಾಜಮೌಳಿ ಇದರ ಬಗ್ಗೆ ಉತ್ಸಾಹ ತೋರಿದ್ದು ಅವರು ಅಮಿರ್ ಖಾನ್ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂಬ ವರದಿಯ ಜೊತೆಗೆ, ಅತ್ತ ದುಬೈ ಮೂಲದ ಕನ್ನಡ ಉದ್ಯಮಿ ಬಿ ಆರ್ ಶೆಟ್ಟಿ ಮಹಾಭಾರತ ನಿರ್ಮಾಣಕ್ಕೆ ೧೦೦೦ ಕೋಟಿ ರೂ ಹೂಡುತ್ತಿದ್ದಾರೆ ಎಂದು ನೆನ್ನೆಯಷ್ಟೇ ವರದಿಯಾಗಿದೆ. ಮೋಹನ್ ಲಾಲ್ ನಟಿಸಲಿರುವ ಈ ಚಿತ್ರದಲ್ಲಿ ಭಾರತ ಮತ್ತು ವಿದೇಶಿ ನಟರು ಮತ್ತು ತಂತ್ರಜ್ಞರು ಕೆಲಸ ಮಾಡಲಿದ್ದು, ವಿ ಎ ಶ್ರೀಕುಮಾರ್ ಮೆನನ್ ನಿರ್ದೇಶಿಸಲಿದ್ದಾರೆ. ಇದು ಕನ್ನಡವೂ ಸೇರಿದಂತೆ ೬ ಭಾಷೆಗಳಲ್ಲಿ ಪ್ರಾಥಮಿಕವಾಗಿ ಮೂಡಿಬರಲಿದ್ದು, ಹಲವು ಭಾಷೆಗಳಿಗೆ ಡಬ್ ಆಗಲಿದೆಯಂತೆ. ಇತ್ತ ಕನ್ನಡ ಚಿತ್ರರಂಗವೂ ಹಿಂದೆ ಬಿದ್ದಿಲ್ಲ. ದರ್ಶನ್ ಅವರ ೫೦ ಚಿತ್ರವಾಗಿ 'ಕುರುಕ್ಷೇತ್ರ' ಮೂಡಿ ಬರಲಿದೆ.
ಮುನಿರತ್ನ ನಿರ್ಮಿಸುತ್ತಿರುವ ಈ ಸಿನೆಮಾವನ್ನು ನಾಗಣ್ಣ ನಿರ್ದೇಶಿಸಲಿದ್ದಾರೆ. ಅವರು ಈ ಹಿಂದೆ ದರ್ಶನ್ ನಟಿಸಿದ್ದ 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಕೂಡ ನಿರ್ದೇಶಿಸಿದ್ದರು ಮತ್ತು ಇದು ಬ್ಲಾಕ್ ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತ್ತು. ಈಗ ದರ್ಶನ್ ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಮುನಿರತ್ನ ಅವರ ಹುಟ್ಟುಹಬ್ಬದ ದಿನವಾದ ಜುಲೈ ೨೩ ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.
ಈ ಸುದ್ದಿಯನ್ನು ಧೃಢೀಕರಿಸುವ ಮುನಿರತ್ನ "ಇದಕ್ಕೆ ಸಿದ್ಧತೆಗಳು ನಡೆದಿವೆ. ಸದ್ಯಕ್ಕೆ ದರ್ಶನ್ ಮಾತ್ರ ನಟನೆಗೆ ಅಂತಿಮಗೊಂಡಿರುವುದು. ಅವರು ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೊಂದು ತಿಂಗಳ ಸಮಯದಲ್ಲಿ ಉಳಿದ ತಾರಾಗಣವನ್ನು ಆಯ್ಕೆ ಮಾಡಲಾಗುತ್ತದೆ" ಎನ್ನುತ್ತಾರೆ.
ಇದನ್ನು ಅದ್ದೂರಿ ಚಿತ್ರವನ್ನಾಗಿಸುವತ್ತ ಯೋಜಿಸಿದ್ದೇವೆ ಎನ್ನುವ ಅವರು "ಬಜೆಟ್ ನ ಯಾವುದೇ ನಿರ್ಬಂಧ ಇಲ್ಲ. ಸಿನೆಮಾ ಚಿತ್ರೀಕರಣಗೊಳ್ಳುವ ವೇಳೆಯಲ್ಲಿ ಇದನ್ನು ನಿರ್ಧರಿಸುತ್ತೇವೆ ಮತ್ತು ಭಾರತೀಯ ಗುಣಮಟ್ಟಕ್ಕೆ ಚಿತ್ರವನ್ನು ನಿರ್ಮಿಸಲಿದ್ದೇವೆ" ಎನ್ನುತ್ತಾರೆ ಮುನಿರತ್ನ.