ಬೆಂಗಳೂರು: ನಟನೆಗೆ ಭಾಷೆಯ ಹಂಗಿಲ್ಲ. ಕನ್ನಡ ಮತ್ತು ಮಲಯಾಳಂ ಭಾಷೆಗಳ ಸಿನೆಮಾಗಳಿಂದ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಶ್ರದ್ಧಾ ಶ್ರೀನಾಥ್, ಮಣಿರತ್ನಂ ನಿರ್ದೇಶನದ 'ಕಾಟ್ರು ವೇಳಿಯಿದೈ' ತಮಿಳು ಸಿನೆಮಾದಲ್ಲಿ ಕೂಡ ನಟಿಸಿದ್ದರು. ಅಲ್ಲದೆ ಮತ್ತೆರಡು ತಮಿಳು ಸಿನೆಮಾಗಳಾದ 'ಇವನ್ ತಂತಿರನ್' ಮತ್ತು 'ವಿಕ್ರಂ ವೇಧ' ಕೂಡ ಅವರ ಕೈನಲ್ಲಿವೆ. ಈಗ ತೆಲುಗು ಚಿತ್ರರಂಗದಲ್ಲಿ ಕೂಡ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.
ಶ್ರದ್ಧಾ ನಿರ್ಮಾಪಕರ ಅಧಿಕೃತ ಘೋಷಣೆಗೆ ಕಾಯುತ್ತಿದ್ದಾರಾದರೂ, ಮೂಲಗಳ ಪ್ರಕಾರ ಟಾಲಿವುಡ್ ನಿಂದ ಅವರಿಗೆ ಎರಡು ಸಿನೆಮಾಗಳಿಂದ ಆಹ್ವಾನ ಬಂದಿದೆಯಂತೆ. ಇದರ ಬಗ್ಗೆ ನಟಿಯನ್ನು ಪ್ರಶ್ನಿಸಿದರೆ "ಟಾಲಿವುಡ್ ನನಗೆ ಹೊಸ ಅನುಭವವಾಗಲಿದೆ. ಈ ಚಿತ್ರರಂಗ ಸಂಪೂರ್ಣ ಕಮರ್ಷಿಯಲ್ ಎನ್ನಲಾಗುತ್ತದೆ. ಅಲ್ಲಿ ಬೇರೆಯದ್ದೇ ರೀತಿಯ ಪ್ರದರ್ಶನ ನೀಡಬೇಕಾಗುತ್ತದೆ. ಇದು ನನಗೆ ಅನ್ವೇಷಿಸಲು ಹೊಸದು. ಇದು ಹೇಗೆ ಒಲಿಯುತ್ತದೋ ಎಂಬುದರ ಬಗ್ಗೆ ಕುತೂಹಲ ಇದೆ" ಎಂದಷ್ಟೇ ಹೇಳುತ್ತಾರೆ.
"ನಿರ್ಮಾಪಕರಿಂದ ಧೃಢೀಕರಣ ಬಂದ ಮೇಲಷ್ಟೇ ಇದರ ಬಗ್ಗೆ ಹೆಚ್ಚು ಮಾತನಾಡುತ್ತೇನೆ" ಎನ್ನುತ್ತಾರೆ ಶ್ರದ್ಧಾ.
ಶ್ರದ್ಧಾ ಸದ್ಯಕ್ಕೆ ತೆಲುಗಿನ 'ಪೆಳ್ಳಿ ಚೂಪುಲು' ಸಿನೆಮಾದ ಕನ್ನಡ ರಿಮೇಕ್ 'ಶಾದಿ ಭಾಗ್ಯ' ಸಿನೆಮಾದಲ್ಲಿ ನಟಿಸುತ್ತಿದ್ದಾರೆ.