'ಬಾಹುಬಲಿ ೨' ಸಿನೆಮಾದ ಸ್ಟಿಲ್
ಬೆಂಗಳೂರು: ಎರಡು ವರ್ಷಗಳ ಹಿಂದೆ 'ಬಾಹುಬಲಿ-ಆರಂಭ' ಸಿನೆಮಾದ ೧೨ ನಿಮಿಷದ ವಿಡಿಯೋ ಅಂತರ್ಜಾಲದಲ್ಲಿ ಸೋರಿಕೆಯಾದಾಗ ನಿರ್ಮಾಪಕರು, ಅಭಿಮಾನಿಗಳು ಮತ್ತು ಇಡೀ ಚಿತ್ರ ತಂಡಕ್ಕೆ ಬೇಸರವಾಗಿತ್ತು.
ಈಗ ಹಿಂದಿನ ಅನುಭವದಿಂದ ಪಾಠ ಕಲಿತಿರುವ ಚಿತ್ರತಂಡ, ಬಾಹುಬಲಿ ಎರಡನೇ ಭಾಗದ ಬಿಡುಗಡೆಗೆ ಯಾವುದೇ ತೊಂದರೆಯಾಗದಂತೆ, ಚಿತ್ರದ ಯಾವುದೇ ಭಾಗ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಿದೆ. ಈ ಯೋಜನೆಯ ಅನಧಿಕೃತ ಸೋರಿಕೆಯನ್ನು ತಡೆಯಲು 36 ವಿ ಎಫ್ ಎಕ್ಸ್ ಸ್ಟುಡಿಯೋಸ್ ನಲ್ಲಿ ೧೦೦೦ ಕ್ಕೂ ಹೆಚ್ಚು ಜನ ತಂತ್ರಜ್ಞರು ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಬಾಹುಬಲಿ ಎರಡನೇ ಭಾಗದ ಗ್ರಾಫಿಕ್ಸ್ ತಂತ್ರಜ್ಞನಾದ ಮುಖ್ಯಸ್ಥ ಕಮಲ್ ಕಣ್ಣನ್ ಇದನ್ನು ಸಾಧ್ಯವಾಗಿಸುತ್ತಿರುವ ಬಗೆಯನ್ನು ವಿವರಿಸಿದ್ದಾರೆ.
ಬಾಹುಬಲಿಯ ದೃಶ್ಯಾವಳಿಗಳು, ಕ್ಲಿಪ್ ಗಳನ್ನು ಜರ್ಮನಿಯಲ್ಲಿರುವ ಸರ್ವರ್ ನಲ್ಲಿ ಸಂಗ್ರಹಿಸಿರುವುದಾಗಿ ತಿಳಿಸುವ ಕಮಲ್, ಯಾವುದೇ ತಂತ್ರಜ್ಞರು ಇವುಗಳಿಗೆ ಅಕ್ಸೆಸ್ ಪಡೆಯಲು ಲಾಗಿನ್ ಐಡಿ ಮತ್ತು ಗುಪ್ತಪದ ಹೊಂದಿರಬೇಕು ಎಂದು ತಿಳಿಸುತ್ತಾರೆ.
ಹಾಗೆಯೇ ಯಾರ್ಯಾರು ಈ ಸರ್ವರ್ ಬಳಸುತ್ತಿದ್ದಾರೆ ಎಂಬುದರ ಬಗ್ಗೆ ಕೂಡ ಈ ತಂಡ ಕಣ್ಗಾವಲು ಇರಿಸಿದೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ: ಮುಕ್ತಾಯ' ಏಪ್ರಿಲ್ ೨೮ ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.