ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಬಗ್ಗೆ ತಮನ್ನಾ ಭಟಿಯಾ ಹಲವು ಬಾರಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ಬಾಹುಬಲಿ' ಸಿನೆಮಾ ದೇಶದೆಲ್ಲೆಡೆ ಬಿಡುಗಡೆಯಾಗುತ್ತಿರುವ ಸಮಯದಲ್ಲಿ ನಟಿ ಈಗ ಬೆಂಗಳೂರಿನಲ್ಲಿದ್ದಾರೆ.
ಬೆಂಗಳೂರಿಗರು ಇಲ್ಲಿನ ತಾಪದ ಬಗ್ಗೆ ಪರಿತಪಿಸುತ್ತಿರುವಾಗ ನಟಿ ಬೆಂಗಳೂರಿನ ಹಮಾಮಾನ ಬಹಳ ತಂಪು ಎನ್ನುತ್ತಾರೆ. "ದೇಶದ ಇತರ ನಗರಗಳಿಗೆ ಹೋಲಿಸಿದರೆ, ಇಲ್ಲಿನ ವಾತಾವರಣ ಹಿತವಾಗಿದೆ. ನಾನು ಹಲವು ನಗರಗಳನ್ನು ಸುತ್ತಿ ಬರುತ್ತಿದ್ದೇನೆ ಮತ್ತು ಬೆಂಗಳೂರು ತಂಪಾಗಿದೆ ಎಂದೆನಿಸಿದೆ ನನಗೆ. ಇಲ್ಲಿ ನನಗೆ ಎಂದಿಗೂ ಹಿತ" ಎನ್ನುತ್ತಾರೆ ತಮನ್ನಾ.
ಈಗ ದೊಡ್ಡ ಬಜೆಟ್ ಚಿತ್ರ 'ಬಾಹುಬಲಿ:ಅಂತಿಮ" ಬಿಡುಗಡೆಗೆ ಕ್ಷಣಗಣನೆಯಲ್ಲಿರುವ ತಮನ್ನಾ "ಅಂತಿಮ ಭಾಗ ಮೊದಲ ಭಾಗಕ್ಕಿಂತಲೂ ಅತಿ ದೊಡ್ಡಮಟ್ಟದ್ದು. ಇಂತಹ ಸಿನೆಮಾಗಳಲ್ಲಿ ಕೆಲಸ ಮಾಡಲು ಅವಕಾಶ ಸಿಗುವುದು ಜೀವನದಲ್ಲಿ ಒಂದೇ ಬಾರಿ. ನನಗೆ ಅವಂತಿಕಾ ಪಾತ್ರ ನೀಡಿದ ನಿರ್ದೇಶಕ ರಾಜಮೌಳಿ ಅವರಿಗೆ ಋಣಿ. ಈ ಪಾತ್ರ ಭಾರತೀಯ ಚಿತ್ರರಂಗದಲ್ಲಿ ನನ್ನ ಇಮೇಜ್ ಬದಲಿಸುತ್ತದೆ. ಇಂತಹ ಸಿನೆಮಾಗಳಲ್ಲಿ ನಟಿಸುವುದಕ್ಕೆ ಎಲ್ಲರಿಗು ಅವಕಾಶ ಸಿಗುವುದಿಲ್ಲ. ಆ ನಿಟ್ಟಿನಲ್ಲಿ 'ಬಾಹುಬಲಿ'ಯ ಭಾಗವಾಗಿರುವುದಕ್ಕೆ ನಾನು ಅದೃಷ್ಟವಂತೆ. ಅದಲ್ಲದೆ ಈಗ ಜನ ನನ್ನನ್ನು ಅವಂತಿಕಾ ಎಂದೇ ಕರೆಯಲು ಪ್ರಾರಂಭಿಸಿರುವುದು ನನಗೆ ಖುಷಿ ತಂದಿದೆ" ಎನ್ನುತ್ತಾರೆ ತಮನ್ನಾ.
ಚಿತ್ರೀಕರಣ ಮುಗಿದಾಗ ದುಃಖವಾಯಿತು ಎನ್ನುವ ತಮನ್ನಾ "ಪ್ರಭಾಸ್, ರಾಣಾ... ನಾವೆಲ್ಲರೂ ಅತ್ಯುತ್ತಮ ಗೆಳೆಯರಾಗಿಬಿಟ್ಟಿದ್ದೆವು. ಹೆಚ್ಚು ಸಮಯ ಸೆಟ್ ನಲ್ಲೆ ಕಳೆಯುತ್ತಿದ್ದೆವು. ಅವರ ಜೊತೆಗೆ ಕೆಲಸ ಮಾಡಿದ್ದು ಮತ್ತು ಸಮಯ ಕಳೆಯುತ್ತಿದ್ದುದು ಅತ್ಯುತ್ತಮ ಕ್ಷಣಗಳು" ಎನ್ನತ್ತಾರೆ ನಟಿ.
ನಿಖಿಲ್ ಕುಮಾರ್ ಅವರ 'ಜಾಗ್ವಾರ್' ಸಿನೆಮಾದಲ್ಲಿ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದ ತಮನ್ನಾ ಕನ್ನಡ ಚಿತ್ರರಂಗಕ್ಕೆ ಅಧಿಕೃತವಾಗಿ ಪೂರ್ಣ ಪ್ರಮಾಣದ ಪ್ರವೇಶ ಪಡೆಯಲು ಕಾಯುತ್ತಿದ್ದಾರಂತೆ. "ನಾನು ಒಳ್ಳೆಯ ಸ್ಕ್ರಿಪ್ಟ್ ಗಾಗಿ ಕಾಯುತ್ತಿದ್ದೇನೆ" ಎನ್ನುತ್ತಾರೆ.