ಸಿನಿಮಾ ಸುದ್ದಿ

ನಮ್ಮ ನೆಲದಲ್ಲೇ ಛಾಯಾಗ್ರಹಣ ಮಾಡಲಿಷ್ಟ; ಇಲ್ಲೇ ಹೆಚ್ಚು ಸೌಂದರ್ಯ ಇದೆ: ಸತ್ಯ ಹೆಗಡೆ

Guruprasad Narayana
ಬೆಂಗಳೂರು: ಸಿನೆಮ್ಯಾಟೋಗ್ರಾಫರ್ ಸತ್ಯ ಹೆಗಡೆ ತಮ್ಮ ಛಾಯಾಗ್ರಹಣದ ಮೂಲಕ ಇಡೀ ಕರ್ನಾಟಕವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ತಮ್ಮ ೧೫ ವರ್ಷಗಳ ಅನುಭವದಲ್ಲಿ ೨೫ಕ್ಕೂ ಹೆಚ್ಚು ಸಿನೆಮಾಗಳ ಮೇಲೆ ಕೆಲಸ ಮಾಡಿರುವ ಸತ್ಯ ಹಲವು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಈಗ ಅವರ ಛಾಯಾಗ್ರಹಣದ, ನಾಗಶೇಖರ್ ನಿರ್ದೇಶನದ 'ಮಾಸ್ತಿ ಗುಡಿ' ಬಿಡುಗಡೆಗೆ ಸಿದ್ಧವಾಗಿದೆ. 
'ಸಂಜು ವೆಡ್ಸ್ ಗೀತಾ' ಮತ್ತು 'ಮೈನಾ'ದಂತಹ ಹಿಟ್ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಸತ್ಯ, ಒಳ್ಳೆಯ ಕಥೆಗೆ ಒಳ್ಳೆಯ ಹಿನ್ನಲೆ ದೃಶ್ಯಗಳು ಬೇಕು. ಅದು ಇಲ್ಲದೆ ಹೋದರೆ ಸ್ಕ್ರಿಪ್ಟ್ ಎಷ್ಟೇ  ಭದ್ರವಾಗಿದ್ದರೂ ಬಿದ್ದುಹೋಗುತ್ತದೆ ಎನ್ನುತ್ತಾರೆ. "'ಸಂಜು ವೆಡ್ಸ್ ಗೀತಾ'ದಲ್ಲಿ ತೋರಿಸಲಾದ ಬೀದರ್ ನ ಸುಂದರ ತಾಣಗಳಾಗಲೀ ಅಥವಾ ಮೈನಾದಲ್ಲಿ ತೋರಿಸಲಾದ ದೂಧ್ ಸಾಗರ್ ಜಲಪಾತವಾಗಲಿ ಸಿನೆಮಾಗೆ ಸಹಕರಿಸಿವೆ. ದೂಧ್ ಸಾಗರ್ ಜಲಪಾತವನ್ನು ಮೈನಾ ಜಲಪಾತ ಎಂದೇ ಜನ ಈಗ ಕರೆಯುತ್ತಾರೆ. ಕನ್ನಡ ಚಿತ್ರರಂಗದ ಮೂಲಕ ರಾಜ್ಯದ ಅತ್ಯುತ್ತಮ ಪಾತ್ರಗಳನ್ನೂ ಸೆರೆಹಿಡಿದಿರುವುದಕ್ಕೆ ಖುಷಿಯಿದೆ. ಸ್ಕ್ರಿಪ್ಟ್ ಗೆ ಹೊಂದಾಣಿಕೆಯಾದಾಗ ಮಾತ್ರ ಛಾಯಾಗ್ರಹಣ ಸುಂದರವಾಗುವುದು, ಮತ್ತು ನಿರ್ದೇಶಕರ ಹಾಗು ನನ್ನ ಹೊಳಹುಗಳು ಸೇರಿದಾಗಲೇ ಇದು ಯಶಸ್ವಿಯಾಗುವುದು" ಎನ್ನುತ್ತಾರೆ ಸತ್ಯ ಹೆಗಡೆ.
ನಟ ವಿಜಯ್ ಅವರ 'ದುನಿಯಾ', 'ಜಂಗ್ಲಿ' ನಂತರ 'ಮಾಸ್ತಿ ಗುಡಿ' ನಟನೊಂದಿಗೆ ಸತ್ಯ ಅವರಿಗೆ ಮೂರನೇ ಸಿನೆಮಾ. "ನನ್ನನ್ನು ನೋಡಿದಾಗಲೆಲ್ಲಾ ವಿಜಯ್ ಒಂದೇ ಮಾತು ಹೇಳುತ್ತಾರೆ..ನನ್ನನ್ನು ಚೆನ್ನಾಗಿ ತೋರ್ಸಿ ಎಂದು..  ಅವರ ಬಲ ನಟನೆ ಮತ್ತು ಆಕ್ಷನ್ ದೃಶ್ಯಗಳಲ್ಲಿ ಇದೆ. ಆದರೆ 'ಮಾಸ್ತಿ ಗುಡಿ'ಯಲ್ಲಿ ಅವರು ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ" ಎನ್ನುತ್ತಾರೆ ಸತ್ಯ. 
SCROLL FOR NEXT