ಮುಂಬೈ: ಫಿಲಂ ಸರ್ಟಿಫಿಕೇಟ್ ಆಪೀಲೆಟ್ ಟ್ರಿಬ್ಯೂನಲ್ ಈಗ ಮಹಿಳಾ ಕೇಂದ್ರಿತ ಸಿನೆಮಾ 'ಲಿಪ್ಸ್ಟಿಕ್ ಅಂಡರ್ ಮೈ ಬುರ್ಕಾ'ಗೆ 'ಎ' ಪ್ರಮಾಣಪತ್ರ ನೀಡಿದ್ದು ಬಿಡುಗಡೆಗೆ ಹಾದಿ ಸುಗಮಗೊಳಿಸಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಲು ಸಿನೆಮಾ ನಿರ್ಮಾಪಕ ಪ್ರಕಾಶ್ ಝಾ ಅವರಿಗೆ ಕೇಳಿಕೊಂಡಾಗ "ಸೆನ್ಸಾರ್ ಮಂಡಳಿಯ ಜೊತೆಗೆ ನಮ್ಮ ಹೋರಾಟಕ್ಕೆ ಜಯ ಸಂದಿರುವುದಕ್ಕೆ ಸಂತಸವಾಗಿದೆ. 'ಲಿಪ್ಸ್ಟಿಕ್ ಅಂಡರ್ ಮೈ ಬುರ್ಕಾ'ಗೆ 'ಎ' ಪ್ರಮಾಣಪತ್ರ ಸಿಕ್ಕಿದ್ದು ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ" ಎಂದು ಝಾ ಹೇಳಿದ್ದಾರೆ.
"ಸಿ ಎಫ್ ಬಿ ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್) ನಿರ್ಧಾರ ಕೇಳಿ ಮತ್ತು ನಮ್ಮ ಸಿನೆಮಾವನ್ನು ಅವರು ಗ್ರಹಿಸಿದ ಬಗೆ ಕೇಳಿ ನಾನು ಜೋರಾಗಿ ನಕ್ಕಿದ್ದೆ. ಆ ಕಥೆಯನ್ನು ಆ ರೀತಿ ಅವರು ಗ್ರಹಿಸಿದ್ದು ಹಾಸ್ಯಾಸ್ಪದ" ಎಂದು ಕೂಡ ಅವರು ಪ್ರಮಾಣ ಪತ್ರ ನೀಡಲು ನಿರಾಕರಿಸದ್ದ ಸಿ ಎಫ್ ಬಿ ಸಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಅಲಂಕೃತ ಶ್ರೀವಾಸ್ತವ ನಿರ್ದೇಶನದ ಈ ಸಿನೆಮಾ ಹಲವು ಅಂತಾರಾಷ್ಟ್ರೀಯ ಪಶಸ್ತಿಗಳನ್ನು ಕೂಡ ಗೆದ್ದಿತ್ತು. ಪ್ರಮಾಣ ಪತ್ರ ನಿರಾಕರಿಸಿದ್ದ ಸೆನ್ಸಾರ್ ಮಂಡಳಿಯ ಕ್ರಮಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು.