ನವದೆಹಲಿ: ಚಿತ್ರದ ಮೇಕಿಂಗ್ ಹಾಗೂ ಅತೀ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಸಿನಿಮಾ ಎಂಬ ಖ್ಯಾತಿ ಗಳಿಸಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರ ನಿರೀಕ್ಷೆಯಂತೆಯೇ ಬಾಕ್ಸ್ ಆಫೀಸ್ ದಾಖಲೆ ಬರೆದಿದೆ.
ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗುವ ಮೂಲಕ ಹೊಸ ದಾಖಲೆ ಬರೆಯಲಿರುವ ಬಾಹುಬಲಿ ಈಗ ಟಿಕೆಟ್ ಬುಕ್ಕಿಂಗ್ ನಲ್ಲೂ ದಾಖಲೆ ಬರೆದಿದ್ದು, ಕೇವಲ 24 ಗಂಟೆಗಳಲ್ಲಿ ಬರೊಬ್ಬರಿ 10 ಲಕ್ಷ ಟಿಕೆಟ್ ಗಳು ಮಾರಾಟವಾಗುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದೆ. ಖ್ಯಾತ ಟಿಕೆಟ್ ಬುಕಿಂಗ್ ತಾಣ ಬುಕ್ ಮೈ ಶೋದಲ್ಲಿ ಇದೂವರೆಗೆ ರಿಲೀಸ್ ಗೆ ಮೊದಲೇ ಅತಿ ಹೆಚ್ಚು ಟೆಕೆಟ್ ಖರೀದಿಯಾಗಿದ್ದು, ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರಕ್ಕೆ. ಈಗ ರಾಜಮೌಳಿ ನಿರ್ದೇಶನದ ಬಾಹುಬಲಿ ದಂಗಲ್ ದಾಖಲೆಯನ್ನು ಹಿಂದಿಕ್ಕಿದ್ದು, 24 ಗಂಟೆಗಳಲ್ಲಿ ಬರೊಬ್ಬರಿ 10 ಲಕ್ಷ ಟಿಕೆಟ್ ಗಳು ಬುಕ್ ಆಗಿವೆಯಂತೆ.
ಸಿಂಗಲ್ ಸ್ಕ್ರೀನ್ ಸಿನಿಮಾದಲ್ಲಿ ಏಪ್ರಿಲ್ 22ರಿಂದ ಬುಕ್ಕಿಂಗ್ ಓಪನ್ ಆದರೆ, ಮಲ್ಟಿಪ್ಲೆಕ್ಸ್ ಗಳಲ್ಲಿ ಏಪ್ರಿಲ್ 24ರಿಂದ ಬುಕಿಂಗ್ ಓಪನ್ ಆಗಿದೆ. ತೆಲುಗು, ತಮಿಳು, ಹಿಂದಿ, ಮಲೆಯಾಳಂ ನಾಲ್ಕು ಭಾಷೆಯಲ್ಲಿ ಈ ಸಿನಿಮಾದ 10 ಲಕ್ಷಕ್ಕೂ ಅಧಿಕ ಟಿಕೆಟ್‍ಗಳು ಬಿಡುಗಡೆಗೂ ಮೊದಲೇ ಮಾರಾಟವಾಗಿದೆ ಎಂದು ಸಿನಿ ಮಾರುಕಟ್ಟೆಯ ವಿಶ್ಲೇಷಕ ಶ್ರೀಧರ್ ಪಿಳ್ಳೈ ಎಂಬವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಇನ್ನು ಪ್ರಸ್ತುತ ಬುಕ್ ಆಗಿರುವ ಟಿಕೆಟ್ ಗಳ ಅನ್ವಯ ಹಾಗೂ ಇತರೆ ಥಿಯೇಟರ್ ಗಳಲ್ಲಿನ ಬಾಹುಬಲಿ ಕ್ರೇಜ್ ಅನ್ನು ಅವಲೋಕಿಸಿರುವ ಬಾಕ್ಸ್ ಆಫೀಸ್ ತಜ್ಞರು, ಬಾಹುಬಲಿ ಮೊದಲ ದಿನ 100 ಕೋಟಿ ರು. ಕಲೆಕ್ಷನ್ ಮಾಡಿದರೆ, ವಾರಾಂತ್ಯಕ್ಕೆ ಒಟ್ಟು 300-350 ರು. ಕಲೆಕ್ಷನ್ ಮಾಡಬಹುದು. ಮೊದಲ ವಾರದಲ್ಲಿ ಒಟ್ಟು 500 ಕೋಟಿ ರು. ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಿದ್ದಾರೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರ ಸಿಂಗಲ್ ಸ್ಕ್ರೀನ್ ಟಿಕೆಟ್ ಗೆ 160 ರೂ. ಮಲ್ಟಿಪ್ಲೆಕ್ಸ್ ಗೆ 200 ರು. ದರವನ್ನು ಏರಿಸಲು ಅನುಮತಿ ನೀಡಿದೆ. ಕರ್ನಾಟಕದಲ್ಲೂ ಈಗಾಗಲೇ ಟಿಕೆಟ್‍ಗಳು ಸೋಲ್ಡ್ ಔಟ್ ಆಗಿರುವ ಕಾರಣ ದಕ್ಷಿಣ ಭಾರತದಲ್ಲಿ ಉತ್ತಮ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ಶುಕ್ರವಾರ ಬಿಡುಗಡೆಯಾಗ ಬೇಕಾದ ಬಾಹುಬಲಿ ದೇಶದ ಹಲವೆಡೆ ಗುರುವಾರ ರಾತ್ರಿಯೇ ಬಿಡುಗಡೆಯಾಗುತ್ತಿದೆ. ಬೆಂಗಳೂರಿನಲ್ಲಿ ರಾತ್ರಿ ತೆಲುಗು ಭಾಷೆಯಲ್ಲಿರುವ ಚಿತ್ರ 52 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾದರೆ 9 ಪರದೆಯಲ್ಲಿ ತಮಿಳು ಬಾಹುಬಲಿ ತೆರೆ ಕಂಡಿದೆ. ಹಿಂದಿಯಲ್ಲಿ 20 ಪರದೆಯಲ್ಲಿ ಬಿಡುಗಡೆಯಾಗಿದೆ.